ಕಂಪ್ಲಿ ತಾಲೂಕಿನ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕಾರ್ಮಿಕ ನಿರೀಕ್ಷಕ ಶಿವಶಂಕರ ಬಿ.ತಳವಾರ ಸುರಕ್ಷತಾ ಕಿಟ್‌ಗಳನ್ನು ವಿತರಿಸಿದರು. ಪ್ರಮುಖರಾದ ವಿರೂಪಾಕ್ಷಿ, ಶಿವಕುಮಾರಗೌಡ, ಐ.ಹೊನ್ನೂರಸಾಬ್, ಪಂಪಾಪತಿ ಇಂಗಳಗಿ, ಆರ್.ನಾಗರಾಜ ಇತರರಿದ್ದರು.
ಕಂಪ್ಲಿ: ಎಲ್ಲ ಕಾರ್ಮಿಕರು ಪ್ರತಿವರ್ಷ ನೋಂದಣಿ ನವೀಕರಿಸಿಕೊಳ್ಳಬೇಕೆಂದು ಕಾರ್ಮಿಕ ನಿರೀಕ್ಷಕ ಶಿವಶಂಕರ ಬಿ.ತಳವಾರ ಹೇಳಿದರು.
ಪಟ್ಟಣದಲ್ಲಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತರಾದ ಕಾರ್ಮಿಕರಿಗೆ ಸುರಕ್ಷತಾ ಕಿಟ್, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ನೋಂದಾಯಿತರಾದ ವಿವಿಧ ವೃತ್ತಿಯ ಕಾರ್ಮಿಕರಿಗೆ ಸ್ಮಾರ್ಟ್‌ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಮಿಕರ ಸುರಕ್ಷತೆಗಾಗಿ 150 ಮೇಸನ್, 40 ಎಲೆಕ್ಟ್ರಿಕಲ್, ತಲಾ 10 ವೆಲ್ಡರ್, ಪ್ಲಂಬರ್ ಕಿಟ್, ತಲಾ 30 ಕಾರ್ಪೆಂಟರ್, ಪೇಂಟರ್ ಕಿಟ್‌ಗಳನ್ನು ಜೇಷ್ಠತಾ ಆಧಾರದಡಿ ವಿತರಿಸಲಾಗಿದೆ ಎಂದರು.
ರಾಜ್ಯ ಶ್ರಮಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸೇವಾ ಸಂಘದ ಅಧ್ಯಕ್ಷ ಶಿವಕುಮಾರಗೌಡ ಮಾತನಾಡಿ, ತಾಲೂಕಿನಲ್ಲಿ 6300 ನೋಂದಾಯಿತ ಕಾರ್ಮಿಕರಿದ್ದು, ಏಕಕಾಲದಲ್ಲಿ ಎಲ್ಲ ಕಾರ್ಮಿಕರಿಗೂ ಅಗತ್ಯವಿರುವ ಗುಣಮಟ್ಟದ ಸುರಕ್ಷತಾ ಕಿಟ್‌ಗಳನ್ನು ವಿತರಿಸಬೇಕು. ಬೋಗಸ್ ಕಾರ್ಡ್‌ಗಳನ್ನು ಪತ್ತೆ ಮಾಡಿ ನೈಜ ಕಾರ್ಮಿಕರಿಗೆ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಶಾಸಕರ ಆಪ್ತ ಕಾರ್ಯದರ್ಶಿ ವಿರೂಪಾಕ್ಷಿ, ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಫೆಡರೇಷನ್ ಅಧ್ಯಕ್ಷ ಐ.ಹೊನ್ನೂರಸಾಬ್, ಕಾರ್ಯದರ್ಶಿ ಆರ್.ನಾಗರಾಜ, ರಾಜ್ಯ ಶ್ರಮಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸೇವಾ ಸಂಘದ ಉಪಾಧ್ಯಕ್ಷ ಪಂಪಾಪತಿ ಇಂಗಳಗಿ ಇದ್ದರು.