ಕುರುಗೋಡು ತಾಲೂಕಿನ ಮಾರುತಿ ಕ್ಯಾಂಪ್‌ನಲ್ಲಿ ಸಿಂಜೆಂಟ ಕಂಪನಿ ಅಧಿಕಾರಿಯನ್ನು ರೈತರು ಕೂರಿಸಿಕೊಂಡಿರುವುದು.
ಕುರುಗೋಡು:ಕ್ರಿಮಿನಾಶಕ ಸಿಂಪಡಣೆಯಿಂದ ಹಾಳಾದ ಮೆಣಸಿನಕಾಯಿ ಬೆಳೆಗೆ ಪರಿಹಾರ ನೀಡಲು ನಿರಾಕರಿಸಿದ ಖಾಸಗಿ ಕಂಪನಿ ಅಧಿಕಾರಿಯನ್ನು ರೈತರು ಮಂಗಳವಾರ ಮಧ್ಯರಾತ್ರಿ ಕೂಡಿ ಹಾಕಿದ ಘಟನೆ ಮಾರುತಿ ಕ್ಯಾಂಪ್‌ನಲ್ಲಿ ನಡೆದಿದೆ.
ರೈತನಿಗೆ ನಷ್ಟ
ಸಿದ್ದಮ್ಮನಹಳ್ಳಿ ಗ್ರಾಮದ ರೈತ ಛಲವಾದಿ ಹನುಮಂತ ಅವರು ಮಾರುತಿ ಕ್ಯಾಂಪ್‌ನಲ್ಲಿರುವ 2 ಎಕರೆಯಲ್ಲಿ ಮೆಣಸಿನಕಾಯಿ ಬೆಳೆದಿದ್ದು, ಸಿಂಜೆಂಟ ಕಂಪನಿಯ ಸಿಮೋಡಿಸ್ ಎಂಬ ಕ್ರಿಮಿನಾಶಕ ಸಿಂಪಡಿಸಿದ್ದರು. ಇದರಿಂದ ಬೆಳೆ ನಾಶವಾಗಿ ರೈತನಿಗೆ ನಷ್ಟವಾಗಿದೆ ಎನ್ನಲಾಗಿದೆ.
ರೈತರು ಈ ಕುರಿತು ತೋಟಗಾರಿಕೆ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸುವ ಜತೆಗೆ ಬಳ್ಳಾರಿಯ ಸಿಂಜೆಂಟ ಕಂಪನಿ ಕಚೇರಿಗೂ ಇತ್ತೀಚೆಗೆ ಮುತ್ತಿಗೆ ಹಾಕಿದ್ದರು. ಪರಿಹಾರ ನೀಡುವುದಾಗಿ ಹೇಳಿದ್ದ ಕಂಪನಿ ಅಧಿಕಾರಿ ಮಾರುತಿ ಕ್ಯಾಂಪ್‌ಗೆ ಮಂಗಳವಾರ ಬಂದಿದ್ದು, ಪರಿಹಾರ ನೀಡಲು ನಿರಾಕರಿಸಿದರು.
ಇದರಿಂದ ಆಕ್ರೋಶಗೊಂಡ ರೈತ ಮುಖಂಡರು ಅಧಿಕಾರಿಯನ್ನು ಕೂಡಿ ಹಾಕಿದ್ದರು. ಸಿಪಿಐ ವಿಶ್ವನಾಥ್ ಹಿರೇಗೌಡರ್, ಪಿಎಸ್‌ಐ ಸುಪ್ರೀತ್ ವಿರೂಪಾಕ್ಷಪ್ಪ ಸ್ಥಳಕ್ಕೆ ಆಗಮಿಸಿ ರೈತರ ಮನವೊಲಿಸುವ ಜತೆಗೆ ತಹಸೀಲ್ದಾರ್ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ರೈತನಿಗೆ ನ್ಯಾಯಕೊಡಿಸುವ ಭರವಸೆ ನೀಡಿದರು. ಬಳಿಕ ರೈತರು ಸಿಂಜೆಂಟ ಕಂಪನಿ ಅಧಿಕಾರಿಯನ್ನು ಬಿಟ್ಟು ಕಳುಹಿಸಿದರು.
ನಷ್ಟಕ್ಕೀಡಾದ ರೈತನಿಗೆ ಕಂಪನಿ ಪರಿಹಾರ ನೀಡಲೇಬೇಕು. ಈ ಹಿನ್ನೆಲೆಯಲ್ಲಿ ನ.10ರಂದು ಸಭೆ ನಿಗದಿ ಮಾಡಲಾಗಿದ್ದು ಎಲ್ಲ ಅಧಿಕಾರಿಗಳು ಹಾಜರಾಗಿ ನೊಂದ ರೈತನಿಗೆ ನ್ಯಾಯ ದೊರಕಿಸಿಕೊಡಬೇಕು .
ಕಳೆದ ನಾಲ್ಕು ವರ್ಷದಿಂದ ಸಿಮೋಡಿಸ್ ಔಷಧದ ಬಗ್ಗೆ ಯಾವುದೇ ದೂರು ಬಂದಿಲ್ಲ. ಪಕ್ಕದ ಜಮೀನಿಗೆ ಅದೇ ಔಷಧ ಸಿಂಪಡಿಸಿ ಎಲ್ಲರಿಗೂ ತೋರಿಸಲಾಗಿದೆ. ಹಾಳಾಗಿರುವ ಬೆಳೆಯ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಿದರೆ ನಿಖರ ಕಾರಣ ತಿಳಿಯುತ್ತದೆ. ಒಂದು ವೇಳೆ ಸಿಮೋಡಿಸ್ ಪರಿಣಾಮದಿಂದ ಹಾಳಾಗಿದ್ದರೆ ಪರಿಹಾರ ನೀಡಲಾಗುವುದು.