ಬಳ್ಳಾರಿಯ ರಾಯಲ್ ಕಾಲನಿಯ ಶ್ರೀರಾಘವೇಂದ್ರ ಗುರುಸಾರ್ವಭೌಮ ಅವರ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀರಾಯರ ಪೂರ್ವಾರಾಧನೆ ಹಿನ್ನಲೆ ರಾಯರ ಮೂರ್ತಿ ಪುಷ್ಪಗಳಿಂದ ಅಲಂಕರಿಸಿ ಪೂಜಿಸಲಾಯಿತು.
ಬಳ್ಳಾರಿ : ನಗರದ ರಾಯಲ್ ಕಾಲನಿಯ ಶ್ರೀಸಂಜೀವರಾಯ ಹಾಗೂ ಶ್ರೀರಾಘವೇಂದ್ರ ಸ್ವಾಮಿಗಳ ಮಠ ಸೇವಾ ಟ್ರಸ್ಟ್ ಸನ್ನಿಧಾನದಲ್ಲಿ ಶ್ರೀರಾಘವೇಂದ್ರ ಗುರುಸಾರ್ವಭೌಮ ಅವರ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಶನಿವಾರ ಶ್ರೀರಾಯರ ಪೂರ್ವಾರಾಧನೆ ವಿಜ್ರಂಭಣೆಯಿಂದ ನೆರವೇರಿತು. ಆರಾಧನೆ ಮಹೋತ್ಸವದ ಪ್ರಯುಕ್ತ ಮಠದಲ್ಲಿ ಬೆಳಗಿನ ಜಾವದಿಂದಲೇ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಬೆಳಗಿನ ಜಾವ ಸುಪ್ರಭಾತ, ಅಷ್ಟೋತ್ತರ ಹಾಗೂ ರಾಯರ ಮೂರ್ತಿಗೆ ನಿರ್ಮಲ ಪೂಜೆ ನೆರವೇರಿಸಲಾಯಿತು. ತದನಂತರ ರಾಯರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ನಯನಮನೋಹರ ಅಲಂಕಾರ, ಕನಕಾಭಿಷೇಕ ಮತ್ತು ಫಲ ಮಂತ್ರಾಕ್ಷತೆ ಸಮರ್ಪಿಸಲಾಯಿತು. ಪೂಜಾ ಕಾರ್ಯಕ್ರಮಗಳ ನಂತರ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಸನ್ನಿಧಾನದಲ್ಲಿ ಸಂಗೀತ ಹಾಗೂ ಭರತನಾಟ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೆಳೆದವು. ಪೂರ್ವಾರಾಧನೆಯ ಹಿನ್ನೆಲೆಯಲ್ಲಿ ಇಡೀ ಮಠದ ಆವರಣವನ್ನು ಬಣ್ಣ ಬಣ್ಣದ ವಿವಿಧ ಸುಗಂಧಿತ ಪುಷ್ಪಗಳು ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ಅಲಂಕರಿಸಲಾಗಿತ್ತು. ಆರಾಧನಾ ಮಹೋತ್ಸವದಲ್ಲಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕು ಹಾಗೂ ಗ್ರಾಮೀಣ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ರಾಯರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ಧನ್ಯತೆ ಮೆರೆದರು.