ಬಳ್ಳಾರಿಯ ಕಾಟನ್ ಮಿಲ್‌ವೊಂದರಲ್ಲಿ ಹತ್ತಿ ಸಂಗ್ರಹಿಸಿರುವುದು.
- ಕಳೆದ ವರ್ಷಕ್ಕಿಂತ ಇಳುವರಿ ಕುಂಠಿತ
- ಕೆಲ ತಿಂಗಳವರೆಗೆ ಮಿಲ್‌ಗಳು ಕಾರ್ಯ
ಬಳ್ಳಾರಿ : ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವುದು ಹಾಗೂ ತೀವ್ರ ರಣಬಿಸಿಲಿನ ವಾತಾವರಣದಿಂದಾಗಿ ಜಿಲ್ಲೆ ಮತ್ತು ಗಡಿ ಭಾಗಗಳಲ್ಲಿ ಹತ್ತಿ ಇಳುವರಿ ಕುಸಿದಿದೆ. ಆದರೆ, ಮಾರುಕಟ್ಟೆಯಲ್ಲಿ ಹತ್ತಿ ಕೊರತೆ ಎದುರಾಗುವ ಭೀತಿಯಿಂದಾಗಿ ಕಾಟನ್‌ಮಿಲ್‌ಗಳಲ್ಲಿ ಹತ್ತಿ ದರ ಮಾತ್ರ ಏರಿಕೆ ಕಂಡಿದೆ.
ಬೆಲೆ ಏರಿಕೆಯಾಗಿರುವುದು ಒಂದೆಡೆ ಸಂತಸ ತಂದಿದ್ದರೂ, ಇಳುವರಿ ಅರ್ಧಕ್ಕಿಂತ ಹೆಚ್ಚು ಕುಸಿದಿರುವುದರಿಂದ ತರಾವರಿ ವೆಚ್ಚ ಭರಿಸಲಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ರಾಂಪುರ, ಬಳ್ಳಾರಿ ಗಡಿಭಾಗ ಹಾಗೂ ಆಂಧ್ರಪ್ರದೇಶದ ಕಣೇಕಲ್, ಹೊಳಗುಂದ ಮಂಡಲ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೋರ್‌ವೆಲ್ ಹಾಗೂ ಪಂಪ್‌ಸೆಟ್‌ಗಳನ್ನು ನಂಬಿ ಹತ್ತಿ ಬೆಳೆಯಲಾಗಿದೆ. ಆದರೆ, ಬೇಸಿಗೆಯಲ್ಲಿ ಪೂರ್ವ ಮುಂಗಾರು ಮಳೆ ಸಕಾಲಕ್ಕೆ ಸುರಿಯದ ಕಾರಣ ಹಾಗೂ ಅತಿಯಾದ ಬಿಸಿಲಿನ ತಾಪಕ್ಕೆ ಹತ್ತಿ ಬೆಳೆ ಕೆಲವಡೆ ಹಾಳಾಗಿದೆ.
ಕೆಲವು ವರ್ಷಗಳ ಹಿಂದೆ ನಗರದಲ್ಲಿ 62 ಕಾಟನ್ ಮಿಲ್‌ಗಳು ಕಾರ್ಯ ನಿರ್ವಹಿಸುತ್ತಿದ್ದವು. ಹತ್ತಿ ಪೂರೈಕೆ ಕಡಿಮೆಯಾದಂತೆ ಸಾಲಗಾರರ ಬಾಧೆಯಿಂದ ಕೆಲ ಮಿಲ್‌ಗಳು ಮುಚ್ಚಲ್ಪಪಟ್ಟಿದ್ದವು. ಕಳೆದ ಒಂದು ತಿಂಗಳಿಂದ ಹತ್ತಿ ಪೂರೈಕೆ ಹೆಚ್ಚುತ್ತಿರುವುದರಿಂದ 37 ಕಾಟನ್ ಮಿಲ್‌ಗಳು ಮತ್ತೆ ಕಾರ್ಯಾರಂಭ ಮಾಡಿವೆ. ಆಗಸ್ಟ್ ತಿಂಗಳ ಕೊನೆಯವರೆಗೆ ಮಿಲ್‌ಗಳು ಸುಸೂತ್ರವಾಗಿ ಕಾರ್ಯ ನಿರ್ವಹಿಸಲಿವೆ.
ಪ್ರಸ್ತುತ ಜೂನ್ ತಿಂಗಳು ಹತ್ತಿ ಬಿತ್ತನೆಗೆ ಸೂಕ್ತ ಕಾಲವಾಗಿದೆ. ಇನ್ನೂ ಕೆಲವು ದಿನಗಳ ಕಾಲ ಮಳೆ ಬಾರದಿದ್ದರೆ ರೈತರು ಹತ್ತಿ ಕೈಬಿಟ್ಟು ಪರ್ಯಾಯ ಬೆಳೆಗಳತ್ತ ಮುಖ ಮಾಡಲಿದ್ದಾರೆ. ಕಳೆದ ವರ್ಷ ಕ್ವಿಂಟಾಲ್‌ಗೆ 7 ಸಾವಿರ ರೂ. ಬೆಲೆಯಿತ್ತು. ಆದರೆ, ಮುಂಬರುವ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಮಾರುಕಟ್ಟೆಗೆ ಹತ್ತಿ ಬರುವುದಿಲ್ಲ ಎಂಬ ಮುನ್ಸೂಚನೆಯಿಂದ ಕಾಟನ್ ಮಿಲ್ ಮಾಲೀಕರು ಈಗಲೇ ಕ್ವಿಂಟಾಲ್‌ಗೆ 9200 ರೂ. ಬೆಲೆ ಕೊಟ್ಟು ಹತ್ತಿ ಖರೀದಿಸುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಹತ್ತಿ ದರ ಹತ್ತು ಸಾವಿರ ರೂ. ಅಧಿಕ ಏರಿಕೆಯಾಗುವ ಸಾಧ್ಯತೆಯಿದೆ.
ಕಳೆದ ವರ್ಷ ಎಕರೆಗೆ 18ರಿಂದ 20 ಕ್ವಿಂಟಾಲ್ ಇಳುವರಿ ಬಂದಿದೆ. ಆದರೆ, ಪ್ರಸ್ತಕ ಸಾಲಿನಲ್ಲಿ ಕೇವಲ ಎಂಟರಿಂದ ಹತ್ತು ಕ್ವಿಂಟಾಲ್ ಇಳುವರಿ ಬರುತ್ತಿದೆ. ಪೂರ್ವ ಮುಂಗಾರು ಮಳೆ ಸುರಿಯದೆ ಒಂದಡೆಯಾದರೆ, ಅತಿಯಾದ ಬಿಸಿಲಿನ ತಾಪಕ್ಕೆ ಬೆಳೆ ಕುಂಠಿತಗೊಂಡಿದೆ. ಜತೆಗೆ ಇತ್ತೀಚಿಗೆ ಸುರಿದ ಮಳೆಯಿಂದ ಕಾಯಿಗಳಲ್ಲಿ ನೀರು ಹೊಕ್ಕು ಇರುಕು ಹೊಡೆಯಲಾರಂಭಿಸಿದೆ. ಇದರಿಂದ ನಿರೀಕ್ಷಿತ ಫಸಲು ಬರುತ್ತಿಲ್ಲ ಎಂಬುದು ರೈತರ ಅಳಲುಯಾಗಿದೆ. ಇನ್ನೂ ಸಕಾಲಕ್ಕೆ ಬಿತ್ತನೆಯಾಗದೆ ಹತ್ತಿ ಉತ್ಪಾದನೆ ಕುಂಠಿತಗೊಂಡರೆ, ಅಕ್ಟೋಬರ್ ವೇಳೆಗೆ ಹತ್ತಿ ತೀವ್ರ ಕೊರತೆ ಎದುರಾಗಲಿದೆ. ಪರಿಣಾಮವಾಗಿ ಜಿಲ್ಲೆಯ ಬಹುತೇಕ ಮಿಲ್‌ಗಳು ಮುಚ್ಚುವ ಹಂತಕ್ಕೆ ತಲುಪಲಿದ್ದು, ಅಲ್ಲಿನ ಕಾರ್ಮಿಕರ ಬದುಕು ಕೂಡ ಬೀದಿಗೆ ಬೀಳುವ ಅತಂಕ ಎದುರಾಗಿದೆ.
ಜೋಳಕ್ಕೆ ಬಿತ್ತನೆಗೆ ಆಸಕ್ತಿ : ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳ ಹಿಂದೆ ಮೆಣಸಿಕಾಯಿ ಬೆಳೆದ ನಷ್ಟ ಅನುಭವಿಸಿದ್ದ ರೈತರು ಈ ಮೆಣಸಿನಕಾಯಿ ಬದಲಾಗಿ ಜೋಳ ಬೆಳೆಯಲು ಆಸಕ್ತಿ ವಹಿಸಿದ್ದಾರೆ. ಇನ್ನೂ ಈ ತಿಂಗಳಲ್ಲಿ ಸೂಕ್ತ ಮಳೆ ಸುರಿಯದಿದ್ದರೆ ಹತ್ತಿ ಬೆಳೆಯುವ ಪ್ರದೇಶವೂ ಜೋಳ ಬೆಳೆಯಲಿದ್ದಾರೆ. ತುಂಗಭದ್ರ ಜಲಾಶಯದಿಂದ ಎಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿ ಕಾಲುವೆಗೆ ನೀರು ಹರಿಸಲು ಇನ್ನೂ ಒಂದೂವರೆ ತಿಂಗಳ ಬೇಕಾಗಲಿದೆ. ಹೀಗಾಗಿ ಮೆಣಸಿಕಾಯಿ ಹಾಗೂ ಹತ್ತಿ ಬಿತ್ತನೆಯ ಕಾಲ ಮುಗಿಯಲಿದೆ. ಕಡಿಮೆಯ ಅವಧಿಯ ಬೆಳೆ ಜೋಳ ಬಿತ್ತನೆಗೆ ಸೂಕ್ತ ಸಮಯವಾದು. ಅಲ್ಲದೆ, ಕೇಂದ್ರ ಸರ್ಕಾರದ ಎಂಎಸ್ಪಿ ಯೋಜನೆಯಡಿ ಜೋಳದ ಬೆಲೆಯೂ ಈ ವರ್ಷ ಏರಿಕೆ ಕಂಡಿದೆ. ಆದ್ದರಿಂದ, ಜೋಳ ಬೆಳೆಗೆ ಕಡಿಮೆ ನೀರು, ಅಲ್ಪವಧಿ ಬೆಳೆ ಹಾಗೂ ಖರ್ಚು ಕೂಡ ತಗ್ಗಲಿದೆ ಎಂಬುದು ರೈತರ ಅಭಿಪ್ರಾಯವಾಗಿದೆ.
"
ಕೋಟ್.... ಮಳೆ ಕೊರತೆ ಹಿನ್ನೆಲೆ ಹತ್ತಿ ಬೆಲೆ ಏರಿಕೆಯಾಗಿದ್ದು, ಇನ್ನೂ ಹೆಚ್ಚಾಗುವ ಸಂಭವವಿದೆ. ಸದ್ಯ, ಮಿಲ್‌ಗಳಲ್ಲಿ ಹತ್ತಿ ಪೂರೈಕೆಯಾಗುತ್ತಿರುವುದರಿಂದ ಕಾರ್ಯ ನಿರ್ವಹಿಸುತ್ತಿವೆ. ಆದರೆ, ಅಕ್ಟೋಬರ್ ತಿಂಗಳಲ್ಲಿ ಮಿಲ್‌ಗಳಿಗೆ ಹತ್ತಿ ಕೊರತೆ ಕಾಡಲಿದೆ.- ದಂಡಿನ ತಿಪ್ಪೇಸ್ವಾಮಿ, ಅಧ್ಯಕ್ಷ , ಕಾಟನ್ ಮಿಲ್ ಅಸೋಸಿಯೇಷನ್, ಬಳ್ಳಾರಿ.