ಶಂಕಿತ ಉಗ್ರನ ನಿವಾಸದ ಮೇಲೆ ದಾಳಿ, ಮೊಬೈಲ್ ಜಪ್ತಿ
- ಆನ್‌ಲೈನ್ ಮೂಲಕ ಯುವಕರನ್ನು ಪ್ರಚೋದನೆ
- ತನಿಖಾ ಸಂಸ್ಥೆಗಳ ಜಂಟಿ ಕಾರ್ಯಾಚರಣೆ
ಬಳ್ಳಾರಿ : ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಇಲ್ಲಿನ ಕೌಲಬಜಾರ್‌ನ ಶಂಕಿತ ಉಗ್ರ ಅಬ್ದುಲ್ ಸಲಾಮ್ ಮನೆಗೆ ಬುಧವಾರ ಭೇಟಿ ನೀಡಿ ಮೊಬೈಲ್ ವಶಪಡಿಸಿಕೊಂಡು ತೆರಳಿದ್ದಾರೆ.
ಆನ್‌ಲೈನ್ ಮೂಲಕ ಯುವಕರನ್ನು ಪ್ರಚೋದಿಸಿ, ಧರ್ಮ ಪ್ರಚೋದನೆ ಹಾಗೂ ನಿಷೇಧಿತ ಉಗ್ರ ಸಂಘಟನೆಗಳ ನೆಟ್‌ವರ್ಕ್ ಹೊಂದಿದ ಆರೋಪದಡಿ ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯಲ್ಲಿ ಮೊಹಮ್ಮದ್ ರೆಹಮತುಲ್ಲ ಷರಿಷ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆಯ ವೇಳೆ ಬಳ್ಳಾರಿಯ ಕೌಲ್‌ಬಜಾರ್ ಮೂಲದ ಅಬ್ದುಲ್ ಸಲಾಮ್, ಈ ರೆಹಮತುಲ್ಲ ಷರಿಷ್ ಜತೆಗೆ ನಿರಂತರ ಸಂಪರ್ಕದಲ್ಲಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಬ್ರೈನ್‌ವಾಶ್ ಮಾಡುವ ಜಾಲದಲ್ಲಿ ಈತ ಸಕ್ರಿಯನಾಗಿದ್ದ ಎಂಬ ಆರೋಪ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ 26ರಂದು ಆಂಧ್ರ ಪೊಲೀಸರು ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ಜಂಟಿ ಕಾರ್ಯಾಚರಣೆಯಲ್ಲಿ ಅಬ್ದುಲ್ ಸಲಾಮ್‌ನನ್ನು ಬಳ್ಳಾರಿಯಲ್ಲಿ ಬಂಧಿಸಿ ಆಂಧ್ರಕ್ಕೆ ಕರೆದೊಯ್ಯಲಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳ ತಂಡವು ಇದೀಗ ಮತ್ತೊಮ್ಮೆ ಬಳ್ಳಾರಿಗೆ ಆಗಮಿಸಿದ್ದಾರೆ. ದಾಳಿಯ ವೇಳೆ ಆರೋಪಿಗೆ ಸಂಬಂಧಿಸಿದ ಮೊಬೈಲ್ ಜಪ್ತಿಪಡಿಸಿಕೊಂಡಿದ್ದಾರೆ. ನಿಷೇಧಿತ ಸಂಘಟನೆಗಳೊಂದಿಗಿನ ಡಿಜಿಟಲ್ ಸಂವಹನ, ಚಾಟ್‌ಗಳು ಮತ್ತು ಅಳಿಸಿಹಾಕಲಾದ ಡೇಟಾ ಮರುಪಡೆಯಲು ಮೊಬೈಲ್ನನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದವು.