ಬಳ್ಳಾರಿಯ ರಾಬಕೊವಿ ಕಚೇರಿಯ ಹೊರನೋಟ 
ಬಳ್ಳಾರಿ

ರಾಬಕೊವಿ ಮೆಗಾಡೇರಿ ಕನಸಿಗೆ ವಿಘ್ನ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಮೆಗಾಡೇರಿ
ಬಳ್ಳಾರಿ :
ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಗಳ ಹಾಲು ಉತ್ಪಾದಕರ ಆಶಾಕಿರಣವಾಗಬೇಕಿದ್ದ ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ)ಒಕ್ಕೂಟದ ಉದ್ದೇಶಿತ ಮೆಗಾಡೇರಿ ನಿರ್ಮಾಣಕ್ಕೆ ನಾನಾ ಅಡೆತಡೆಗಳ ಸುಳಿಯಲ್ಲಿ ಸಿಲುಕಿದೆ.
ಕೆಎಂಆರ್‌ಸಿ 80 ಕೋಟಿ ರೂ. ಹಾಗೂ ರಾಬಕೊವಿ ಒಕ್ಕೂಟದಿಂದ 80 ಕೋಟಿ ರೂ. ಸೇರಿ ಒಟ್ಟಾರೆ 160 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೆಗಾಡೇರಿಗೆ ಜಮೀನು ಗುರುತಿಸಲಾಗಿದ್ದರೂ, ತಾಂತ್ರಿಕ ಮತ್ತು ಆರ್ಥಿಕ ಕಾರಣಗಳಿಂದಾಗಿ ಕಾಮಗಾರಿ ಆರಂಭ ವಿಳಂಬವಾಗುತ್ತಿದೆ.
ಅನುದಾನದ ಹಂಚಿಕೆಯಲ್ಲಿ ತಾರತಮ್ಯ : ಈ ಯೋಜನೆಯ ಪ್ರಮುಖ ಸವಾಲೆಂದರೆ ಅನುದಾನದ ಮಿತಿ. ಮೆಗಾಡೇರಿ ನಾಲ್ಕು ಜಿಲ್ಲೆಗಳ ವ್ಯಾಪ್ತಿಗೆ ಸೇರಿದ್ದರೂ, ಪ್ರಸ್ತುತ ಲಭ್ಯವಿರುವ ಕೆಎಂಆರ್‌ಸಿ ಅನುದಾನವು ಕೇವಲ ಬಳ್ಳಾರಿ ಜಿಲ್ಲೆಗೆ ಮಾತ್ರ ಸೀಮಿತವಾಗಿದೆ. ಮೊದಲ ಹಂತದಲ್ಲಿ 80 ಕೋಟಿ ರೂ. ಅನುದಾನಕ್ಕೆ ಅನುಮೋದನೆ ಸಿಕ್ಕಿದ್ದು, ಬಳ್ಳಾರಿ ತಾಲೂಕಿನ ಕೊಳಗಲ್ ಬಳಿ 15 ಎಕರೆ ಜಮೀನನ್ನು ಗುರುತಿಸಲಾಗಿದೆ. ಈ ಜಮೀನಿಗಾಗಿ 2.92 ಕೋಟಿ ರೂ. ಜಿಲ್ಲಾಡಳಿತಕ್ಕೆ ಒಕ್ಕೂಟವೂ ಈಗಾಗಲೇ ಪಾವತಿಸಿದೆ.
ಜಿಲ್ಲಾಡಳಿತದ ಪ್ರಶ್ನೆ : ಒಕ್ಕೂಟವು ಆರಂಭದಲ್ಲಿ ದಿನಕ್ಕೆ ಒಂದು ಲಕ್ಷ ಲೀಟರ್ ಹಾಲು ಸಂಗ್ರಹಣೆ ಗುರಿ ಹೊಂದಿತ್ತು. ಆದರೆ, ಈಗ ಅದನ್ನು ನಾಲ್ಕು ಲಕ್ಷ ಲೀಟರ್‌ಗೆ ಏರಿಸಲು ಉದ್ದೇಶಿಸಲಾಗಿದೆ. ಈ ದಿಢೀರ್ ಬದಲಾವಣೆಯು ಜಿಲ್ಲಾಡಳಿತದ ಸಂಶಯಕ್ಕೆ ಕಾರಣವಾಗಿದೆ. ನಾಲ್ಕು ಜಿಲ್ಲೆಗಳ ಹಾಲು ಉತ್ಪಾದಕ ಸಂಘಗಳಿಂದ ಪ್ರತಿದಿನ 4 ಲಕ್ಷ ಲೀಟರ್ ಹಾಲು ಸಂಗ್ರಹಿಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ. ಈ ಗುರಿಯನ್ನು ತಲುಪಲು ಹಾಲು ಉತ್ಪಾದಕರ ಸಂಘಗಳನ್ನು ಬಲಪಡಿಸುವ ಮತ್ತು ಹೈನುಗಾರಿಕೆ ಉತ್ತೇಜಿಸುವ ಅಗತ್ಯವಿದೆ ಎಂಬುದಾಗಿ ಜಿಲ್ಲಾಡಳಿತ ಅಭಿಪ್ರಾಯಪಟ್ಟಿದೆ. ಮೆಗಾಡೇರಿ ನಿರ್ಮಾಣದ ಈ ಯೋಜನೆಯ ಭವಿಷ್ಯವು ಮುಂಬರುವ ಏಪ್ರಿಲ್ 26ರಂದು ನಡೆಯಲಿರುವ ಮಹತ್ವದ ಸಭೆಯ ಮೇಲೆ ನಿಂತಿದೆ. ಈ ಸಭೆಯಲ್ಲಿ ಒಕ್ಕೂಟವು ಪರಿಷ್ಕೃತ ಸಮಗ್ರ ಯೋಜನಾ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಿದೆ. ಈ ವರದಿಯಲ್ಲಿ ನೀಡಲಾಗುವ ಅಂಕಿ-ಅಂಶಗಳು ಮತ್ತು ತಾಂತ್ರಿಕ ವಿವರಗಳನ್ನು ಆಧರಿಸಿ ಮೆಗಾಡೇರಿ ನಿರ್ಮಾಣದ ಅಂತಿಮ ನಿರ್ಧಾರ ಹೊರಬೀಳಲಿದೆ.
ಬಾಕ್ಸ್ : ಒಕ್ಕೂಟ ವ್ಯಾಪ್ತಿಯ ರಾಯಚೂರು ಜಿಲ್ಲೆಯಲ್ಲಿ 2.66 ಲಕ್ಷ, ಕೊಪ್ಪಳ ಜಿಲ್ಲೆಯಲ್ಲಿ 2.69 ಲಕ್ಷ , ವಿಜಯನಗರ ಜಿಲ್ಲೆಯಲ್ಲಿ 2.70 ಲಕ್ಷ, ಬಳ್ಳಾರಿ ಜಿಲ್ಲೆಯಲ್ಲಿ 1.43 ಲಕ್ಷ ಹಸುಗಳಿವೆ. ಆದರೆ, ಕೇವಲ 3.50 ಲಕ್ಷ ಹಸುಗಳು ಮಾತ್ರ ಹಾಲು ನೀಡುತ್ತಿವೆ. ಆರು ಲಕ್ಷ ಹಸುಗಳು ಹಾಲು ಯಾಕೆ ನೀಡುತ್ತಿಲ್ಲ ಎಂಬುದನು ಅರಿಯಲು ಒಕ್ಕೂಟದ ಸಿಬ್ಬಂದಿನ್ನು ಹಳ್ಳಿಗಳಿಗೆ ಕಳಿಸಿ ವರದಿ ಪಡೆಯಲು ಒಕ್ಕೂಟ ಮುಂದಾಗಿತ್ತು. ಈಗಾಗಲೇ ಐದು ತಿಂಗಳು ಕಳೆದರೂ ವರದಿ ಮಾತ್ರ ಬಹಿರಂಗಗೊಂಡಿಲ್ಲ. ಈ ಎಲ್ಲ ಹಸುಗಳು ಹಾಲು ನೀಡಿದರೆ ಒಕ್ಕೂಟದ ಸಾರ್ಮಥ್ಯ ಹೆಚ್ಚಲಿದ್ದು ಅಭಿವೃದ್ಧಿ ಕೂಡ ಸಾಧ್ಯವಾಗಲಿದೆ ಎಂಬ ಉದ್ದೇಶವಾಗಿದೆ. ಅಲ್ಲದೆ, ಸದ್ಯ ಒಕ್ಕೂಟ ವ್ಯಾಪ್ತಿಯಲ್ಲಿ ಬಳ್ಳಾರಿ 10 ಸಾವಿರ ಲೀ., ರಾಯಚೂರು 30 ಸಾವಿರ ಲೀ., ಕೊಪ್ಪಳ 65 ಸಾವಿರ ಲೀ. ಹಾಗೂ ವಿಜಯನಗರದಲ್ಲಿ 1.20 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ.
ಕರೆ ಸ್ವೀಕರಿಸದ ಎಂಡಿ : ಮೆಗಾಡೇರಿ ನಿರ್ಮಾಣದ ಅಡೆತಡೆಗಳ ಬಗ್ಗೆ ಮಾಹಿತಿಗಾಗಿ ರಾಬಕೊವಿ ಒಕ್ಕೂಟದ ಎಂಡಿ ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ.
ಕೋಟ್..... ಮೆಗಾಡೇರಿ ಕಾಮಗಾರಿ ನಿರ್ಮಾಣದ ಪರಿಷ್ಕೃತ ಡಿಪಿಆರ್ ಸಲ್ಲಿಸಲು ಒಕ್ಕೂಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಏ.26 ರಂದು ನಡೆಯುವ ಸಭೆಯಲ್ಲಿ ಚರ್ಚಿಸಲಾಗುವುದು.
- ನಾಗೇಂದ್ರ ಪ್ರಸಾದ್ ಕೆ., ಡಿಸಿ, ಬಳ್ಳಾರಿ.