ಬಳ್ಳಾರಿಯ ಗಡಿಗಿ ಚನ್ನಪ್ಪ ವೃತ್ತದಲ್ಲಿ ನೀಟ್ ಪ್ರಶ್ನೆ ಪತ್ರಿಕೆಯ ಸೋರಿಕೆ ಖಂಡಿಸಿ ಎಐಡಿಎಸ್‌ಒ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಈರಣ್ಣ, ಪದಾಧಿಕಾರಿಗಳಾದ ಕಂಬಳಿ ಮಂಜುನಾಥ, ಶಾಂತಿ, ಅನುಪಮಾ, ಕಾಂತೇಶ್,ತಿಪ್ಪೇಸ್ವಾಮಿ, ಶಿವಕುಮಾರ್, ರಾಜಶೇಖರ್, ಅಂಜಲಿ ಇದ್ದರು.
- ವೈದ್ಯಕೀಯ ಶಿಕ್ಷಣದ ಕನಸು ಸಂಕಷ್ಟ
- ಕೋಚಿಂಗ್ ಮಾಫಿಯಾಗಳ ದುರಾಶೆ
ಬಳ್ಳಾರಿ : ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಅಪಾಯಕ್ಕೆ ದೂಡಿರುವ ಭ್ರಷ್ಟ ಎನ್‌ಟಿಎ ಸಂಸ್ಥೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂಬುದಾಗಿ ಆಗ್ರಹಿಸಿ, ಇಲ್ಲಿನ ಗಡಿಗಿ ಚನ್ನಪ್ಪ ವೃತ್ತದಲ್ಲಿ ಎಐಡಿಎಸ್‌ಒ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.
ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಕೆ.ಈರಣ್ಣ ಮಾತನಾಡಿ, ಸರ್ಕಾರದ ನಿರ್ಲಕ್ಷದಿಂದ ಸುಮಾರು 23 ಲಕ್ಷ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸು ಸಂಕಷ್ಟಕ್ಕೆ ಸಿಲುಕಿಸಿದೆ. ವ್ಯವಸ್ಥೆಯ ದುರಾಸೆ, ಕಾರ್ಪೊರೇಟ್ ಕೋಚಿಂಗ್ ಮಾಫಿಯಾಗಳ ದುರಾಶೆ, ಸಂಸ್ಥೆಗಳ ಆಡಳಿತಾತ್ಮಕ ವೈಪಲ್ಯ ಹಾಗೂ ಸಾಲು ಸಾಲು ಪ್ರಶ್ನೆಪತ್ರಿಕೆ ಸೋರಿಕೆಗಳು ದೇಶದ ಲಕ್ಷಾಂತರ ವಿದ್ಯಾರ್ಥಿಗಳನ್ನು ಅಕ್ಷರಶಃ ಸಾವಿನ ದಡಕ್ಕೆ ತಳ್ಳುತ್ತಿವೆ ಎಂದು ದೂರಿದರು.
ದೇಶದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ಧ್ವಂಸಗೊಳಿಸುತ್ತಿರುವ ಈ ಕೇಂದ್ರೀಕೃತ ಪರೀಕ್ಷಾ ಪದ್ಧತಿ ಮತ್ತು ಭ್ರಷ್ಟ ಸಂಸ್ಥೆಯು ರದ್ದಾಗುವವರೆಗೂ ವಿದ್ಯಾರ್ಥಿ ಸಮುದಾಯವು ನ್ಯಾಯ ಸಿಗುವವರೆಗೂ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಕರೆ ನೀಡಿದರು.