ಬಳ್ಳಾರಿಯ ಡಿಸಿ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಷರತ್ತು ರಹಿತವಾಗಿ ರಸಗೊಬ್ಬರ ಪೂರೈಸಲಿ ಎಂಬುದಾಗಿ ಆಗ್ರಹಿಸಿ ಪ್ರತಿಭಟನೆ ನಡೆಯಿತು. ಸಂಘದ ರಾಜ್ಯಾಧ್ಯಕ್ಷ ಆರ್.ಮಾಧವರೆಡ್ಡಿ, ರೈತರಾದ ಶೇಷಪ್ಪ, ಗೋವಿಂದರೆಡ್ಡಿ, ತಿಮ್ಮಪ್ಪ, ಗಾದಿಲಿಂಗನಗೌಡ, ಹನುಮಂತ ಇತರರಿದ್ದರು.
- ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿರುದ್ಧ ಘೋಷಣೆ
- ರೈತರು ಸ್ವಾವಲಂಬಿ ಬದುಕು
ಬಳ್ಳಾರಿ : ರಾಜ್ಯಾದ್ಯಂತ ರೈತರಿಗೆ ಷರತ್ತು ರಹಿತವಾಗಿ ರಸಗೊಬ್ಬರ ಪೂರೈಕೆ ಮಾಡಬೇಕು ಎಂಬುದಾಗಿ ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯೂ ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಪ್ರತಿಭಟನೆಗೂ ಮುನ್ನ ನಗರದ ಬಳ್ಳಾರಿ ಹೆಲ್ತ್ ಸಿಟಿ (ಬಿಎಚ್‌ಸಿ) ಆಸ್ಪತ್ರೆಯಿಂದ ಯಿಂದ ಡಿಸಿ ಕಚೇರಿವರೆಗೆ ಬೈಕ್ ರ‌್ಯಾಲಿ ಮೂಲಕ ಸಂಚರಿಸಿ ಕಚೇರಿಗೆ ತಲುಪಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಬಳಿಕ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಮಾಧವ ರೆಡ್ಡಿ ಮಾತನಾಡಿ, ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ರೈತರು ಸ್ವಾವಲಂಬಿ ಬದುಕು ನಡೆಸುತ್ತಿದ್ದರು. ಆದರೆ, ಹಸಿರು ಕ್ರಾಂತಿಯ ನಂತರ ರಾಸಾಯನಿಕ ಗೊಬ್ಬರ, ಬೀಜ ಮತ್ತು ಕೀಟನಾಶಕಗಳ ಮೇಲೆ ಅವಲಂಬಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕೃಷಿ ವೆಚ್ಚಗಳು ಗಗನಕ್ಕೇರಿದ್ದು, ರೈತರು ಸಾಲದ ಸುಳಿಯಲ್ಲಿ ಸಿಲುಕಿ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಮೆರಿಕ, ಇಸ್ರೇಲ್ ಮತ್ತು ಇರಾನ್ ಸೇರಿದಂತೆ ಅಂತರರಾಷ್ಟ್ರೀಯ ಬೆಳವಣಿಗೆಗಳು ಹಾಗೂ ಯುದ್ಧ ಪರಿಸ್ಥಿತಿಯನ್ನು ನೆಪವನ್ನಾಗಿ ಮಾಡಿಕೊಂಡು ರಸಗೊಬ್ಬರ ಕಂಪನಿಗಳು ಬೆಲೆಗಳನ್ನು ಏಕಾಏಕಿ ಏರಿಕೆ ಮಾಡುತ್ತಿವೆ. ಸರ್ಕಾರಗಳು ಈ ಬೆಲೆ ಏರಿಕೆಯನ್ನು ನಿಯಂತ್ರಿಸುವ ಬದಲು ಮೌನ ವಹಿಸಿರುವುದರಿಂದ ರೈತರು ಹೆಚ್ಚಿನ ಹಣ ನೀಡಿ ರಸಗೊಬ್ಬರ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ದೂರಿದರು.
ರಸಗೊಬ್ಬರಗಳ ಜೊತೆಗೆ ನ್ಯಾನೋ ಗೊಬ್ಬರ ಹಾಗೂ ಇತರ ಉತ್ಪನ್ನಗಳನ್ನು ಕಡ್ಡಾಯವಾಗಿ ಖರೀದಿಸುವಂತೆ ಒತ್ತಾಯಿಸಲಾಗುತ್ತಿದೆ. ಅಲ್ಲದೆ, ಎಫ್‌ಐಡಿ ವ್ಯವಸ್ಥೆಯ ನೆಪದಲ್ಲಿ ಗೊಬ್ಬರ ಬಳಕೆಗೆ ಮಿತಿ ವಿಧಿಸಿ ಹಂತ ಹಂತವಾಗಿ ವಿತರಣೆ ಮಾಡಲಾಗುತ್ತಿದೆ. ಇದರಿಂದ ಬೆಳೆಗಳಿಗೆ ಅಗತ್ಯವಿರುವ ಸಮಯದಲ್ಲಿ ಸಾಕಷ್ಟು ಗೊಬ್ಬರ ದೊರೆಯದೇ ಇಳುವರಿ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.
ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸುವುದು, ಲಿಂಕ್ ಪ್ರೊಡಕ್ಟ್‌ಗಳ ಮಾರಾಟವನ್ನು ರೈತರ ಮೇಲೆ ಹೇರಿಕೆ ಮಾಡುವುದು ಹಾಗೂ ಗೊಬ್ಬರ ವಿತರಣೆಯಲ್ಲಿ ವಿಧಿಸಲಾಗುತ್ತಿರುವ ನಿರ್ಬಂಧಗಳನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು. ರೈತರಿಗೆ ಅಗತ್ಯ ಪ್ರಮಾಣದ ರಸಗೊಬ್ಬರವನ್ನು ಯಾವುದೇ ಷರತ್ತುಗಳಿಲ್ಲದೆ ಸಕಾಲದಲ್ಲಿ ಪೂರೈಕೆ ಮಾಡುವ ಮೂಲಕ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.