ಬಳ್ಳಾರಿಯ ಗಡಗಿ ಚನ್ನಪ್ಪ ವೃತ್ತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ಜಿಲ್ಲಾ ಸಂಚಾಲಕ ಕೆ.ದಿಲೀಪ್ ಕುಮಾರ್, ಪದಾಧಿಕಾರಿಗಳಾದ ನಾಗರಾಜ್, ವಿರೇಶ್, ಸೌಮ್ಯ, ಜ್ಯೋತಿ, ಲಾವಣ್ಯ ಇತರರಿದ್ದರು.
ಬಳ್ಳಾರಿ : ನಗರದ ಖಾಸಗಿ ಶಾಲೆಯ ವಸತಿ ನಿಲಯ ವಿದ್ಯಾರ್ಥಿಯ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ, ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ದಿಂದಪ್ರತಿಭಟನೆ ನಡೆಯಿತು.
ಎಬಿವಿಪಿ ಜಿಲ್ಲಾ ಸಂಚಾಲಕ ಕೆ.ದಿಲೀಪ್ ಕುಮಾರ್ ಮಾತನಾಡಿ, ನಗರದ ಖಾಸಗಿ ಶಾಲೆಯ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದೆ. ಈ ಘಟನೆಯಲ್ಲಿ ಏಳು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ದುರದೃಷ್ಟವಶಾತ್ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಈ ಘಟನೆಯು ಜಿಲ್ಲಾದ್ಯಂತ ತೀವ್ರ ಆತಂಕಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ವಸತಿ ನಿಲಯದಲ್ಲಿ ಸರಿಯಾದ ಪಾಲಕರಿಲ್ಲ, ರಕ್ಷಣಾ ಸಿಬ್ಬಂದಿಯ ಕೊರತೆಯಿದೆ. ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆ ನೀಡದೆ ವಸತಿ ನಿಲಯ ನಡೆಸುವುದು ಕಾನೂನು ಬಾಹಿರವಾಗಿದೆ. ಒಬ್ಬ ಅಮಾಯಕ ವಿದ್ಯಾರ್ಥಿಯ ಸಾವಿಗೆ ಹೊಣೆ ಯಾರು ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಕಳೆದ 3-4 ತಿಂಗಳುಗಳಿಂದ ಶಾಂತಿಯುತ ವಾತಾವರಣ ಹಾಳಾಗುತ್ತಿದ್ದು, ಯುವಕರು ಡ್ರಗ್ಸ್ ಮತ್ತು ಗಾಂಜಾ ಚಟಕ್ಕೆ ಬಲಿಯಾಗುತ್ತಿದ್ದಾರೆ. ಕಾಲೇಜು ಸೇರಿದಂತೆ ಹಲವೆಡೆ ಇಂತಹ ಚಟುವಟಿಕೆಗಳು ಹೆಚ್ಚಾಗುತ್ತಿವೆ. ವಿದ್ಯಾರ್ಥಿಯ ಸಾವಿಗೆ ಕಾರಣರಾದವರನ್ನು ಮತ್ತು ರಕ್ಷಣೆಯ ವಿಷಯದಲ್ಲಿ ನಿರ್ಲಕ್ಷೃ ತೋರಿದ ಶಾಲಾ ಆಡಳಿತ ಮಂಡಳಿಯ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸರಳಾದೇವಿ ಕಾಲೇಜಿನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಸಂಗಂ ವೃತ್ತ, ರಾಯಲ್ ವೃತ್ತ ಮಾರ್ಗವಾಗಿ ಡಿಸಿ ಕಚೇರಿವರೆಗೆ ನಡೆಯಿತು. ಮೆರವಣಿಗೆಯಲ್ಲಿ ಕಾಲೇಜಿನ ನೂರರು ವಿದ್ಯಾರ್ಥಿಗಳು ಖಾಸಗಿ ಶಾಲೆಯ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.