ಬಳ್ಳಾರಿ : ಇಲ್ಲಿನ ಖಾಸಗಿ ಸಂಜಯ್ ಗಾಂಧಿ ಪಾಲಿಟೆಕ್ನಿಕ್ ಕಾಲೇಜಿನ ಆರವಿಂದ್ ಎಂಬ ವಿದ್ಯಾರ್ಥಿಯು ಕಾಲೇಜು ಪ್ರಾಂಶುಪಾಲರ ಹಾಗೂ ಮೆಕಾನಿಕ್ಯಾಲ್ ವಿಭಾಗದ ಮುಖ್ಯಸ್ಥನ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಸಿದ್ದರಾಮ ಆರೋಪಿಸಿದರು.
ನಗರದ ಪತ್ರಿಕಾಭವನದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈವರೆಗೆ ಸಂಬಂಧಪಟ್ಟವರನ್ನು ದಸ್ತಗಿರಿ ಮಾಡದೆ ಇರುವುದನ್ನು ಎನ್‌ಎಸ್ ಯುಐ ಸಂಘಟನೆ ಖಂಡಿಸಿದೆ. ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಯ ಕುಟುಂಬಕ್ಕೆ ಕಾಲೇಜು ಆಡಳಿತ ಮಂಡಳಿ ಸೂಕ್ತ ಪರಿಹಾರ ಒದಗಿಸಬೇಕು. ತಪ್ಪಿಸ್ಥರ ಮೇಲೆ ಕ್ರಮ ಜರುಗಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮೃತ ವಿದ್ಯಾರ್ಥಿಯ ತಾಯಿ ಪುಷ್ಪ ಮಾತನಾಡಿ, ಕಾಲೇಜಿನಲ್ಲಿ ಮಗ ಮಾಡಿರುವ ತಪ್ಪಿಗೆ ನೇರವಾಗಿ ವಿಭಾಗದ ಮುಖ್ಯಸ್ಥರ ಕಾಲು ಹಿಡಿದರೂ ಕೂಡ ಕರುಣೆ ತೋರದೆ ನನ್ನ ಮುಂದಯೇ ಅರವಿಂದ್‌ನನ್ನು ನಿಂದನೆ ಮಾಡಿದ್ದಾರೆ ಎಂಬುದಾಗಿ ಗಂಭೀರವಾಗಿ ಆರೋಪಿಸಿದರು. ಆರವಿಂದ್ ಮೊದಲ ಹಾಗೂ ಎರಡನೇ ಸೆಮ್‌ನ ಪರೀಕ್ಷೆಯ ಫಲಿತಾಂಶದಲ್ಲಿ ರ‌್ಯಾಂಕ್ ಪಡೆದ ವಿದ್ಯಾರ್ಥಿಯಾಗಿದ್ದ. ವಿಭಾಗದ ಮುಖ್ಯಸ್ಥರ ಅತಿರೇಕ ನಿಂದನೆಯಿಂದ ನನ್ನ ಮಗ ಮೃತಪಟ್ಟಿದ್ದು, ಕಾಲೇಜು ಆಡಳಿತ ಮಂಡಳಿಯೂ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ಸಂಘಟನೆ ಪದಾಧಿಕಾರಿಗಳಾದ ಶ್ರೀಧರ್, ಶ್ರೀನಿವಾಸ್, ಮೃತನ ತಂದೆ ಹನುಮಂತರೆಡ್ಡಿ, ಸಹೋದರ ಗಣೇಶ ಇತರರಿದ್ದರು.