ಕಾನಮಡುಗು ಶ್ರೀ ಶರಣಬಸವೇಶ್ವರ ದಾಸೋಹ ಮಠದಲ್ಲಿ ಸೋಮವಾರ 4ನೇ ದಾಸೋಹ ಪೌರ್ಣಮಿ ಕಾರ್ಯಕ್ರಮವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದೆ ಮರಿಯಮ್ಮನಹಳ್ಳಿ ಡಾ.ನಾಗರತ್ನಮ್ಮ ಉದ್ಘಾಟಿಸಿದರು. ಮಲ್ಲಿಕಾರ್ಜುನ ಮಹಾಮನೆ, ಯೋಗಿರಾಜೇಂದ್ರ ಶಿವಾಚಾರ್ಯರು, ದಾ.ಮ.ಐಮುಡಿ ಶರಣಾರ್ಯರು, ಎನ್.ಎಂ.ರವಿಕುಮಾರ್, ಮುರಾರ್ಜಿ, ಕುರಿಹಟ್ಟಿ ರಾಜು ಇದ್ದರು.  
ಬಳ್ಳಾರಿ

ರಂಗ ಶಿಕ್ಷಣ ಪಡೆದವರಿಗೆ ನೌಕರಿ ನೀಡಲಿ

4ನೇ ದಾಸೋಹ ಪೌರ್ಣಮಿ ಕಾರ್ಯಕ್ರಮದಲ್ಲಿ ಸರ್ಕಾರಕ್ಕೆ ರಂಗಭೂಮಿ ಕಲಾವಿದೆ ಡಾ.ನಾಗರತ್ನಮ್ಮ ಮನವಿ

ಕಾನಹೊಸಹಳ್ಳಿ: ರಂಗಭೂಮಿ ಶಿಕ್ಷಣ ಪಡೆದಿರುವ ಪದವೀಧರರಿಗೆ ಸರ್ಕಾರ ನೌಕರಿ ನೀಡುವ ಮೂಲಕ ಅವರ ಬದುಕಿಗೆ ಭದ್ರತೆ ಒದಗಿಸಬೇಕೆಂದು ರಂಗಭೂಮಿ ಹಿರಿಯ ಕಲಾವಿದೆ ಮರಿಯಮ್ಮನಹಳ್ಳಿ ಡಾ.ನಾಗರತ್ನಮ್ಮ ಮನವಿ ಮಾಡಿದರು.

ಕಾನಮಡುಗು ಗ್ರಾಮದ ಶರಣಬಸವೇಶ್ವರ ದಾಸೋಹ ಮಠದ ಅಂಗಳದಲ್ಲಿ ಸೋಮವಾರ ಸಂಜೆ 4ನೇ ದಾಸೋಹ ಪೌರ್ಣಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಂಗಭೂಮಿ ಕಲೆಯನ್ನು ಉಳಿಸಿ, ಬೆಳೆಸಿದ ಸಾಕಷ್ಟು ಕಲಾವಿದೆಯರು ಈಗ ಕೂಲಿ, ಮನೆಗೆಲಸ ಮಾಡುತ್ತಿದ್ದಾರೆ. ವೃದ್ಧ ಕಲಾವಿದೆಯರಿಗೆ ಪಿಂಚಣಿ ಬರುತ್ತಿದೆಯಾದರೂ, ಕಲಾಸೇವೆಯಲ್ಲಿ ತೊಡಗಿರುವ ಯುವಕ, ಯುವತಿಯರಿಗೆ ಭವಿಷ್ಯ ಇಲ್ಲದಂತಾಗಿದೆ. ಇಂತವರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಮನವಿ ಮಾಡಿದರು.

ಹಿಂದೆಲ್ಲ ರೈತರು ತಾವು ಬೆಳೆದ ಬೆಳೆಯ ಅಲ್ಪ ಭಾಗ ಮತ್ತು ಹಣವನ್ನು ನೀಡಿ ಪ್ರೋತ್ಸಾಹಿಸುತ್ತಿದ್ದರು. ಹವ್ಯಾಸಿ ಕಲಾವಿದರು ತಮ್ಮ ಮನೆಯಲ್ಲಿರುವ ಚೂರುಪಾರು ಬಂಗಾರ ಅಡವಿಟ್ಟು ಹಳ್ಳಿಗಳಲ್ಲಿ ನಾಟಕ ಪ್ರದರ್ಶನ ಏರ್ಪಡಿಸುವ ಮೂಲಕ ರಂಗಭೂಮಿ ಕಲೆ ಮತ್ತು ಕಲಾವಿದೆಯರನ್ನು ಬೆಳೆಸಿದ್ದಾರೆ. ಸದ್ಯ ನಾಟಕ ಪ್ರದರ್ಶನಗಳು ಕಡಿಮೆಯಾಗಿವೆ. ಪೌರಾಣಿಕ, ಸಾಮಾಜಿಕ ನಾಟಕಗಳಲ್ಲಿ ಕಾನಮಡುಗು, ಆಲೂರು ಸೇರಿ ಈ ಭಾಗದ ಹಳ್ಳಿಗಳಲ್ಲಿ ಅಭಿನಯಿಸಿರುವೆ. ಶರಣಬಸಪ್ಪನ ಕೃಪೆಯಿಂದ ನಾನು ಶ್ರೀಮಠಕ್ಕೆ ಬರುವಂತಾಯಿತು. ಯುವ ಸಮುದಾಯ ಮೊಬೈಲ್ ವ್ಯಾಮೋಹಕ್ಕೆ ಒಳಗಾಗಿದೆೆ. ಮಕ್ಕಳನ್ನು ಮೊಬೈಲ್‌ನಿಂದ ದೂರವಿರಿಸಿ ಉತ್ತಮ ಶಿಕ್ಷಣ ಕೊಡಲು ಪಾಲಕರು ಮುಂದಾಗಬೇಕು ಎಂದರು.

ರಂಗಭೂಮಿ ನಿರ್ದೇಶಕ ಮಲ್ಲಿಕಾರ್ಜುನ ಮಹಾಮನಿ ಮಾತನಾಡಿ, ಆಧುನಿಕತೆಗೆ ಹೊಂದಿಕೊಳ್ಳುವುದು ಅನಿವಾರ್ಯ. ಆದರೆ, ಮೊಬೈಲ್‌ನಲ್ಲಿ ಮುಳುಗುವ ನಾವುಗಳು ಸಂಬಂಧಗಳನ್ನು ಮರೆಯುತ್ತಿದ್ದೇವೆ. ಸಂಸ್ಕೃತಿ, ಭಾಷೆ ಕಳೆದುಕೊಂಡರೆ ನಾವು ನಾವಾಗಿಯೇ ಇರಲಾಗುವುದಿಲ್ಲ. ಕಾನಮಡುಗು ಶರಣಬಸವೇಶ್ವರ ದಾಸೋಹ ಮಠದ ಪರಂಪರೆ, ಧಾರ್ಮಿಕ ನಂಬಿಕೆ ಭಕ್ತರ ಮನದಲ್ಲಿ ಬೇರೋರಿದೆ. ಹೀಗಾಗಿ ಇಲ್ಲಿ ಒಂದು ದಿನವೂ ದಾಸೋಹ ಕಾರ್ಯ ನಿಂತಿಲ್ಲ. ಪ್ರತಿತಿಂಗಳು ದಾಸೋಹ ಪೌರ್ಣಮಿ ಕಾರ್ಯಕ್ರಮದ ಮೂಲಕ ಧಾರ್ಮಿಕ, ಸಾಂಸ್ಕೃತಿಕ ಅರಿವು ಮೂಡಿಸಲು ವೇದಿಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದರು.

ಸಾನ್ನಿಧ್ಯವಹಿಸಿದ್ದ ಕೊಟ್ಟೂರಿನ ಯೋಗಿರಾಜೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಸಾಹಿತಿ ಹಾಗೂ ದಾಸೋಹ ಪೌರ್ಣಮಿ ಕಾರ್ಯಕ್ರಮದ ಸಂಚಾಲಕ ಎನ್.ಎಂ.ರವಿಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಶರಣಬಸವೇಶ್ವರ ದಾಸೋಹ ಮಠದ ಧರ್ಮಾಧಿಕಾರಿ ದಾ.ಮ. ಐಮಡಿ ಶರಣಾರ್ಯರು, ಜಿಪಂ ಮಾಜಿ ಸದಸ್ಯ ಹೊಂಬಾಳೆ ರೇವಣ್ಣ, ಶಿಕ್ಷಕರಾದ ಡಾ.ಕೆ. ಬಸವರಾಜ, ಡಾ.ದಿವಾಕರ ನಾರಾಯಣ, ಶರಣಬಸವೇಶ್ವರ ಡಿ.ಇಡಿ ಕಾಲೇಜು ಪ್ರಾಚಾರ್ಯ ಎಲ್.ಪಿ. ಸುಭಾಶ್ಚಂದ್ರ ಬೋಸ್, ಬಿ.ಎಸ್.ವಾಣಿ, ಪಾಟೀಲ್, ಆಲೂರು ಮಲ್ಲಿಕಾರ್ಜುನ, ಶರಣೇಶ್, ನಾಗಭೂಷಣ, ಚಿನ್ನೋಬನಹಳ್ಳಿ ಡಿ.ಒ. ಮುರಾರ್ಜಿ, ಯಲ್ಲಪ್ಪ, ಕುರಿಹಟ್ಟಿ ರಾಜು, ಮಂಜುನಾಥ, ಸಂಗೀತ ನಿರ್ದೇಶಕ ಇಮಡಾಪುರ ಕುಮಾರಸ್ವಾಮಿ, ಶ್ರೀಧರ್, ನಾಗರಹುಣಸೆ ದುರುಗೇಶ್, ಹನುಮಂತ, ಪುನೀತ್ ಸಂಗಡಿಗರು ವಚನ ಹಾಗೂ ರಂಗ ಗೀತೆಗಳನ್ನು ಹಾಡಿದರು.

ಈ ವೇಳೆ ಡಾ.ನಾಗರತ್ನಮ್ಮ, ಮಲ್ಲಿಕಾರ್ಜುನ ಮಹಾಮನೆ, ಡಿ.ಒ.ಮುರಾರ್ಜಿ, ಜಿ.ಹೇಮಲತಾ ಡಾ.ಕೆ.ಬಸವರಾಜ ಇವರನ್ನು ಸನ್ಮಾನಿಸಲಾಯಿತು.