ಕೂಡ್ಲಿಗಿಯಲ್ಲಿ ರಾಜ್ಯ ಶಾಲಾ ಶಿಕ್ಷಣ ಇಲಾಖೆ ಲಿಪಿಕ ನೌಕರರು, ವಾಹನ ಚಾಲಕರು ಮತ್ತು ಡಿ-ಗ್ರೂಪ್ ನೌಕರರ ತಾಲೂಕು ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಕ್ಕೆ ಸಂಘದ ಜಿಲ್ಲಾಧ್ಯಕ್ಷ ಸರ್ವೋತ್ತಮಗೌಡ ಚಾಲನೆ ನೀಡಿದರು. ತಾಲೂಕು ಅಧ್ಯಕ್ಷ ಕೆ.ವೀರೇಶ್ ಬಾಬು, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಆರ್.ಬಿ.ಬಸವರಾಜ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಬಿ.ಶಿವಾನಂದ, ತಾಲೂಕು ಅಧ್ಯಕ್ಷ ಜಿ.ಕೊಟ್ರಗೌಡ, ಕಾರ್ಯದರ್ಶಿ ಟಿ.ಎಚ್.ಎಂ.ಶೇಖರಯ್ಯ, ನಿವೃತ್ತ ಬಿಇಒ ಪದ್ಮನಾಭ ಕರಣಂ ಇತರರಿದ್ದರು. 
ಬಳ್ಳಾರಿ

ಕೆಲಸಕ್ಕೆ ತಕ್ಕ ವೇತನ-ಸೌಲಭ್ಯ ನೀಡಲಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಬಿ.ಶಿವಾನಂದ ಆಗ್ರಹ
  • ಕೂಡ್ಲಿಗಿ ಲಿಪಿಕ ತಾಲೂಕು ಪದಾಧಿಕಾರಿಗಳ ಪದಗ್ರಹಣ
ಕೂಡ್ಲಿಗಿ: ಶಿಕ್ಷಕರನ್ನು ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಲಿಪಿಕ ನೌಕರರ ಕೆಲಸದ ಒತ್ತಡ ಹೆಚ್ಚಾಗುತ್ತಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಬಿ.ಶಿವಾನಂದ ಹೇಳಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ ಲಿಪಿಕ ನೌಕರರು, ವಾಹನ ಚಾಲಕರು ಮತ್ತು ಡಿ-ಗ್ರೂಪ್ ನೌಕರರ ಸಂಘದಿಂದ ಶನಿವಾರ ಏರ್ಪಡಿಸಿದ್ದ ತಾಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾರ್ವಜನಿಕರ ಸಮಸ್ಯೆಗಳನ್ನು ವೈಯಕ್ತಿಕ ಸಮಸ್ಯೆ ಎಂದು ಭಾವಿಸಿ ಬಗೆಹರಿಸುವಲ್ಲಿ ಲಿಪಿಕರ ಸೇವೆ ಅನನ್ಯ. ಆದರೆ, ಹೆಚ್ಚುವರಿ ಕೆಲಸದ ಹೊರೆ, ಮಾನಸಿಕ ಒತ್ತಡ, ಸಂಬಳ, ಬಡ್ತಿ ಸಮಸ್ಯೆಗಳು ಸಾಮಾನ್ಯವಾಗಿವೆ. ಹಾಗಾಗಿ ಹೆಚ್ಚುವರಿ ಕೆಲಸಕ್ಕೆ ತಕ್ಕ ವೇತನ, ಸೌಲಭ್ಯಗಳನ್ನು ಒದಗಿಸಬೇಕು. ಕೆಲಸದ ಹೊರೆಯನ್ನು ಕಡಿಮೆ ಮಾಡಿ, ಮಾನಸಿಕ ಒತ್ತಡ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ಲಿಪಿಕ ನೌಕರರು, ವಾಹನ ಚಾಲಕರು ಮತ್ತು ಡಿ-ಗ್ರೂಪ್ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ವೀರೇಶ್ ಬಾಬು ಮಾತನಾಡಿ, ನಮ್ಮ ಸಂಘ ಸುಮಾರು 40 ವರ್ಷಗಳಿಂದ ನಿಷ್ಕ್ರಿಯವಾಗಿತ್ತು, ಈಗ ಬೋಧಕೇತರರ ಎಲ್ಲ ಸಮಸ್ಯೆಗಳಿಗೂ ಸ್ಪಂದಿಸುವ ಮೂಲಕ ಲಿಪಿಕರ ಶ್ರೇಯೋಭಿವೃದ್ಧಿಗೆ ಒತ್ತು ನೀಡುವುದಾಗಿ ತಿಳಿಸಿದರು.
ತಾಲೂಕು ಲಿಪಿಕ ನೌಕರರ ಸಂಘಕ್ಕೆ ಪ್ರಸನ್ನ (ಉಪಾಧ್ಯಕ್ಷ), ನಟರಾಜ (ಕಾರ್ಯದರ್ಶಿ), ಭೋಜಪ್ಪ (ಖಜಾಂಚಿ), ಸಿದ್ದೇಶ್ ಸಂಘಟನಾ ಕಾರ್ಯದರ್ಶಿಯಾಗಿ ಪದಗ್ರಹಣ ಮಾಡಿದರು. ಸಂಘದ ಜಿಲ್ಲಾಧ್ಯಕ್ಷ ಸರ್ವೋತ್ತಮ ಗೌಡ, ಜಿಲ್ಲಾ ಕಾರ್ಯದರ್ಶಿ ಅರುಣ್ ಕುಮಾರ್, ಬಿಇಒ ಮೈಲೇಶ್ ಬೇವೂರು, ನಿವೃತ್ತ ಬಿಇಒ ಪದ್ಮನಾಭ ಕರಣಂ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಆರ್.ಬಿ.ಬಸವರಾಜ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಜಿ.ಕೊಟ್ರಗೌಡ, ಕಾರ್ಯದರ್ಶಿ ಟಿ.ಎಚ್.ಎಂ.ಶೇಖರಯ್ಯ, ಬಿ.ಎಂ.ಭರತೇಶ್ ಕುಮಾರ್, ಬಿ.ಮಂಜುನಾಥ, ಮಹಮ್ಮದ್ ರಫೀಕ್, ಜೀನಾಬಿ, ಗಿರೀಶ ಮತ್ತಿತರರು ಇದ್ದರು.