ಹೂವಿನಹಡಗಲಿಯ ಶಾಸ್ತ್ರಿ ವೃತ್ತದಲ್ಲಿ ಬಿಜೆಪಿಯಿಂದ ತಹಸೀಲ್ದಾರ್ ಕೆ.ಎಂ.ಗುರುಬಸವರಾಜಗೆ ಮನವಿ ಸಲ್ಲಿಸಲಾಯಿತು. ಶಾಸಕ ಕೃಷ್ಣನಾಯ್ಕ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಸಂಜೀವ ರಡ್ಡಿ, ಉಪಾಧ್ಯಕ್ಷರಾದ ಈಟಿ ಲಿಂಗರಾಜ, ಶಶಿಧರ ಹಣ್ಣಿ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ್ ಇತರರಿದ್ದರು.
- ತಹಸೀಲ್ದಾರ್ ಕೆ.ಎಂ.ಗುರುಬವಸರಾಜಗೆ ಮನವಿ
ಹೂವಿನಹಡಗಲಿ:
ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಬಿಜೆಪಿಯಿಂದ ಸೋಮವಾರ ಪಟ್ಟಣದ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ತಾನದಿಂದ ಶಾಸ್ತ್ರೀ ವೃತ್ತದವರೆಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನಾ ರ‌್ಯಾಲಿ ನಡೆಸಿ ತಹಸೀಲ್ದಾರ್ ಕೆ.ಎಂ.ಗುರುಬವಸರಾಜಗೆ ಮನವಿ ಸಲ್ಲಿಸಿದರು.
ಶಾಸಕ ಕೃಷ್ಣನಾಯ್ಕ ಮಾತನಾಡಿ, ರಾಜ್ಯದಲ್ಲಿ ಮಳೆಕೊರತೆಯಿಂದ ಬೆಳೆಗಳು ಒಣಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ರೈತರ ಕಷ್ಟಗಳಿಗೆ ಸ್ಪಂಧಿಸುವ ಬದಲು ರಾಜ್ಯ ಸರ್ಕಾರದ ನಾಯಕರು ದೆಹಲಿಯಲ್ಲಿ ಹನಿಮೂನ್ ಮಾಡುತ್ತಿದ್ದಾರೆ. ರೈತರು ಬಿತ್ತನೆಗೆ 40-50 ಸಾವಿರ ರೂ. ಖರ್ಚು ಮಾಡಿದ್ದು, ಬಿತ್ತನೆ ಮಾಡಿದಾಗಿನಿಂದ ಮಳೆಯಾಗದ ಕಾರಣ ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಸಾಲ ಮಾಡಿ ಬೆಳೆ ಬೆಳೆಯಲು ಮುಂದಾದ ರೈತರ ಬದುಕು ಬೀದಿಗೆ ಬರುತ್ತಿದೆ. ಜನರಿಗೆ ಆಸೆ ತೋರಿಸಿ ಅಧಿಕಾರಕ್ಕೆ ಬಂದ ನಾಯಕರು ಆ ಖಾತೆ ಬೇಕು, ಈ ಖಾತೆ ಬೇಕು ಎನ್ನುತ್ತಾ ದೆಹಲಿಯಲ್ಲಿದ್ದಾರೆ.
ರಾಜ್ಯದಲ್ಲಿ ರೈತರ ಕಷ್ಟ ಕೇಳಲು ಯಾವ ಸಚಿವರು ಬಂದಿಲ್ಲ. ರೈತರಿಗೆ ಕನಿಷ್ಠ 50 ಸಾವಿರ ರೂ. ಬೆಳೆ ಪರಿಹಾರ ನೀಡಬೇಕು. ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು. ಕುಡಿವ ನೀರು ಮತ್ತು ಮೇವು ಖರೀದಿಗೆ ಪ್ರತಿ ತಾಲೂಕಿಗೆ 50 ಕೋಟಿ ರೂ. ಅನುದಾನ ನೀಡಬೇಕು. ರೈತರ ಬೆಳೆ ವಿಮೆ ಹಣ ಕೂಡಲೇ ಬಿಡುಗಡೆ ಮಾಡಬೇಕು. ಗುಳೆ ಹೋಗಿರುವ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಗುಳೆ ತಪ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಸಂಜೀವ ರಡ್ಡಿ, ಉಪಾಧ್ಯಕ್ಷರಾದ ಈಟಿ ಲಿಂಗರಾಜ, ಶಶಿಧರ ಹಣ್ಣಿ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ್, ಪ್ರಮುಖರಾದ ಮಂಜುನಾಥ ಜೈನ್, ಎಂ.ಬಸವರಾಜ, ಡಿ.ಪುನೀತ, ಶಿರಾಜ ಬಾವಿಹಳ್ಳಿ, ಹುಲುಗೇಶ ಮೇಟಿ, ಎನ್.ಕೋಟೆಪ್ಪ, ಕೋಡಿಹಳ್ಳಿ ಕೊಟ್ರೇಶ, ಟಿ.ಮಹಾಂತೇಶ, ಎಸ್.ಬಸವರಾಜ, ಕೋಡಬಾಳ ಚಂದ್ರಪ್ಪ, ಕೊಟ್ರೇಶ ನಾಯ್ಕ, ಆರ್.ಟಿ.ನಾಗರಾಜ ಇತರರಿದ್ದರು.