ಬಳ್ಳಾರಿ : ಇಲ್ಲಿನ ಬಿಡಿಎಎ ಫುಟ್ಬಾಲ್ ಮೈದಾನದಲ್ಲಿ ಫೆ.8ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದ ಆಲ್ ಇಂಡಿಯಾ ಫಾರ್ವಡ್ ಬ್ಲಾಕ್ ಜಿಲ್ಲಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಂಚಾಲಕ ಟಿ.ರಾಮಾಂಜಿನೇಯ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸ್ಥಾಪಿಸಿದ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಪಕ್ಷದ ಕುರಿತು ಮಹತ್ವದ ವಿಚಾರಗಳನ್ನು ಜನತೆಗೆ ತಿಳಿಸುವ ಉದ್ದೇಶ ಹೊಂದಿದೆ. ಸುಭಾಷ್ ಅವರು ಕೇವಲ ಸ್ವಾತಂತ್ರೃ ಹೋರಾಟಗಾರರಲ್ಲ. ಅವರು ಶೋಷಣೆಯ ವಿರುದ್ಧ ಹೋರಾಡಿದ ಗಣ್ಯ ವ್ಯಕ್ತಿಗಳಾಗಿದ್ದು, ಸಮಾನತೆ ಹಾಗೂ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದ್ದರು ಎಂದರು.
ಈ ಸಮಾವೇಶಕ್ಕೆ ಎಐಎಫ್‌ಬಿ ಪಕ್ಷದ ಪ್ರಧಾನ ಕಾರ್ಯದರ್ಶಿ ಜಿ.ಆರ್.ಶಿವಶಂಕರ್, ಹೆರಕಲ್ ಆನಂದಪ್ಪ ತಾತನವರು, ಟಿಯುಸಿಸಿ ಕಾರ್ಯದರ್ಶಿ ಅಶೋಕ, ಹಿರಿಯ ವಕೀಲ ಶ್ರೀಕಾಂತ್ ಕೆ.ವಿ. ಸೇರಿದಂತೆ ನಾನಾ ಮಹನೀಯರು ಭಾಗವಹಿಸಿಲಿದ್ದಾರೆ ಎಂದರು. ಸಂಘಟನೆಯ ಮುಖಂಡರಾದ ಟಿ.ಭಾಗ್ಯ, ದಳವಾಯಿ ಗೋಪಾಲಕೃಷ್ಣ ಇದ್ದರು.