ಬಳ್ಳಾರಿಯ ಡಿಸಿ ಕಚೇರಿ ಮುಂದೆ ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಜಂಟಿ ಕಾರ್ಮಿಕರ ಸಂಘಟನೆಯಿಂದ ಎಡಿಸಿ ಮಹಮ್ಮದ್ ಎನ್.ಜುಬೇರ್‌ಗೆ ಮನವಿ ಸಲ್ಲಿಸಲಾಯಿತು. ಪದಾಧಿಕಾರಿಗಳಾದ ಸತ್ಯಬಾಬು, ಆರ್.ಮಾಧವರೆಡ್ಡಿ, ಶಿವಶಂಕರ್, ಡಿ.ವಿ.ಸೂರ್ಯನಾರಾಯಣ, ದೇವದಾಸ್, ಟಿ.ಜಿ.ವಿಠ್ಠಲ್ ಇತರರಿದ್ದರು. 
ಬಳ್ಳಾರಿ

ಸರ್ಕಾರಿ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಲಿ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಎಡಿಸಿ ಮಹಮ್ಮದ್ ಎನ್.ಜುಬೇರ್‌ಗೆ ಮನವಿ

ಬಳ್ಳಾರಿ:

ರಾಜ್ಯದಲ್ಲಿ ಕಾರ್ಪೊರೇಟ್ ಕಂಪನಿಗಳ ಭೂ ಕಬಳಿಕೆ ವಿರೋಧಿಸಿ ಡಿಸಿ ಕಚೇರಿ ಆವರಣದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಜಂಟಿ ಕಾರ್ಮಿಕರ ಸಂಘಟನೆಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಕೃಷಿ ಭೂಮಿ ಕೇವಲ ಆಸ್ತಿ ಅಲ್ಲ. ರೈತರ ಜೀವನಾಧಾರ, ದೇಶದ ಆಹಾರ ಭದ್ರತೆಯ ಆಧಾರವಾಗಿದೆ. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ರೈತರ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಂಡು ಕೈಗಾರಿಕೆ, ರಿಯಲ್ ಎಸ್ಟೇಟ್ ಹಾಗೂ ಇತರ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಒದಗಿಸುವ ಕ್ರಮದಿಂದ ರೈತರನ್ನು ಭೂಹೀನರನ್ನಾಗಿ ಮಾಡಲಾಗುತ್ತಿದೆ. ಕಾರ್ಮಿಕ ವಿರೋಧಿ 4 ಲೇಬರ್ ಕೋಡ್ ರದ್ದು ಮಾಡಿ, ಬೆಲೆ ಏರಿಕೆ ತಡೆಗಟ್ಟಬೇಕು. ಅರಣ್ಯ ಕಂದಾಯ ಮತ್ತು ಇತರೆ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಸಾಗುವಳಿದಾರರಿಗೆ ಕೂಡಲೇ ಹಕ್ಕು ಪತ್ರ ವಿತರಿಸಬೇಕು. ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುವ ಕ್ರಮಗಳನ್ನು ಹಿಂಪಡೆಯಬೇಕು. ರೈತರು ಮತ್ತು ಕಾರ್ಮಿಕರ ಮೇಲೆ ಹೆಚ್ಚುತ್ತಿರುವ ಆರ್ಥಿಕ ಒತ್ತಡ ನಿವಾರಿಸಬೇಕು. ಉದ್ಯೋಗ, ನ್ಯಾಯಯುತ ಆದಾಯ ಮತ್ತು ಸಾಮಾಜಿಕ ಭದ್ರತೆ ಖಾತರಿಪಡಿಸಬೇಕು ಎಂದು ಆಗ್ರಹಿಸಿದರು.
ರೈತರ ಭೂಮಿ, ಕಾರ್ಮಿಕರ ಹಕ್ಕುಗಳು ಮತ್ತು ದೇಶದ ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಒಪ್ಪಿಸುವುದನ್ನು ಸಹಿಸುವುದಿಲ್ಲ. ರೈತ ಕಾರ್ಮಿಕರ ಐಕ್ಯತೆ ಹೋರಾಟ ಮತ್ತಷ್ಟು ಬಲಪಡಿಸುವ ಮೂಲಕ ಈ ನೀತಿಗಳ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.