ಬಳ್ಳಾರಿಯ ನೂತನ ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಡಿಸಿ ಕೆ.ನಾಗೇಂದ್ರ ಪ್ರಸಾದ್, ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಇದ್ದರು. ==
ದರೋಜಿ ಕೆರೆಯು ಪ್ರವಾಸಿ ಆಕರ್ಷಣೆಯ ಸಾಮರ್ಥ್ಯ ಹೊಂದಿದ್ದು, ಕಲುಷಿತ ಮುಕ್ತಗೊಳಿಸಿ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಡಿಸಿ ಕೆ.ನಾಗೇಂದ್ರ ಪ್ರಸಾದ್ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಮಾತನಾಡಿದರು. ಈ ಯೋಜನೆಗೆ ಅಗತ್ಯವಿರುವ ವೆಚ್ಚವನ್ನು ಕೆಎಂಇಆರ್‌ಸಿ ಅಡಿಯಲ್ಲಿ ಭರಿಸಲು ತಜ್ಞರ ಸಲಹೆ ಪಡೆದು ಕೆರೆಯ ಜೀವವೈವಿಧ್ಯ ಉಳಿಸಲು ಸಮಗ್ರ ಹೆಜ್ಜೆ ಇಡಲಾಗುವುದು. ದರೋಜಿ ಕೆರೆಯು ಅತ್ಯಂತ ಸೂಕ್ಷ್ಮ ಹಾಗೂ ಶ್ರೀಮಂತ ಜಲಚರ ಪರಿಸರ ವ್ಯವಸ್ಥೆ ಹೊಂದಿದೆ. ಇಲ್ಲಿ ಬೆಳೆಯುವ ಬೃಹತ್ ಗಾತ್ರದ ದರೋಜಿ ತಳಿಯ ಮೀನುಗಳಿಗೆ ಕೋಲ್ಕತ್ತಾದಂತಹ ನಗರಗಳಲ್ಲೂ ಭಾರಿ ಬೇಡಿಕೆಯಿದೆ ಎಂದರು.
ನಾರಿಹಳ್ಳ ಪ್ರದೇಶದಿಂದ ಹರಿದುಬರುವ ನೀರು ಮತ್ತು ಹೂಳು ಕೆರೆಯ ನೀರಿನ ಶೇಖರಣಾ ಸಾಮರ್ಥ್ಯ ಕುಗ್ಗಿಸಿದೆ. ಜೊತೆಗೆ, ಕುಡತಿನಿ, ಕುರೇಕುಪ್ಪ ಹಾಗೂ ತೋರಣಗಲ್ಲು ಭಾಗಗಳ ಸಂಸ್ಕರಿಸದ ತ್ಯಾಜ್ಯ ನೀರು ಹಾಗೂ ಘನತ್ಯಾಜ್ಯಗಳು ನೇರವಾಗಿ ಕೆರೆಗೆ ಸೇರುತ್ತಿರುವುದು ಮಾಲಿನ್ಯಕ್ಕೆ ಮುಖ್ಯ ಕಾರಣವಾಗಿದೆ ಎಂದರು.
ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಗೆ ಒಳಪಡುವ ಕೆರೆಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿತ ಕಂಡಿದ್ದು, ರೈತರಲ್ಲಿ ಭಾರಿ ಆತಂಕ ಮೂಡಿಸಿದೆ. ಬಳ್ಳಾರಿ ಮತ್ತು ಸಿರಗುಪ್ಪ ತಾಲೂಕುಗಳಲ್ಲಿನ ಕೆರೆಗಳ ಸ್ಥಿತಿ ಚಿಂತಾಜನಕವಾಗಿವೆ. ಶೇ.30ಕ್ಕಿಂತ ಕಡಿಮೆ ನೀರು ಸಂಗ್ರಹವಾಗಿದೆ. ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ಒಟ್ಟು 36 ಕೆರೆಗಳಿದ್ದು, ಈ ಪೈಕಿ ಬಳ್ಳಾರಿ ತಾಲೂಕಿನಲ್ಲಿ 7 ಹಾಗೂ ಸಿರಗುಪ್ಪ ತಾಲೂಕಿನಲ್ಲಿ 29 ಕೆರೆಗಳಿವೆ. ಪ್ರಸ್ತುತ ಹೆಚ್ಚಿನ ಕೆರೆಗಳು ಒಣಗುವ ಹಂತ ತಲುಪಿವೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕೆರೆಗಳಲ್ಲಿ ನೀರಿನ ಸಂಗ್ರಹಣೆ ತೀವ್ರ ಪ್ರಮಾಣದಲ್ಲಿ ಕುಸಿದಿದೆ ಎಂದರು.
ಜಿಲ್ಲಾದ್ಯಂತ ಒಟ್ಟು 46 ಮಳೆ ಮಾಪಕ ಯಂತ್ರಗಳು ಪರಿಶೀಲನೆಯಲ್ಲಿದ್ದು, ಇವುಗಳಲ್ಲಿ ಹಲವು ಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೆಎಸ್‌ಎನ್‌ಡಿಎಂಸಿ ಕನ್ಸಲ್ಟೆಂಟ್ ಅವರೊಂದಿಗೆ ಸಮನ್ವಯ ಸಾಧಿಸಿ, ದೋಷಪೂರಿತ ಯಂತ್ರಗಳನ್ನು ತಕ್ಷಣವೇ ದುರಸ್ತಿಗೊಳಿಸಿ ಸಕ್ರಿಯಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದರು.
ಕುಡಿವ ನೀರು, ಜಾನುವಾರುಗಳಿಗೆ ಮೇವಿನ ಲಭ್ಯತೆ, ಬೆಳೆ ವಿಮೆ ನೋಂದಣಿ, ರಸ್ತೆಗಳಲ್ಲಿ ತಗ್ಗು-ಗುಂಡಿ, ರಸ್ತೆ ಮೇಲ್ಸೇತುವೆ ದುರಸ್ತಿ, ನಿರಂತರ ವಿದ್ಯುತ್ ಸರಬರಾಜಿಗೆ ಆದ್ಯತೆ ನೀಡಬೇಕು. ಭಾರತ್ ಜೋಡೋ ಯುವಕರ ಸಂಘ ನೋಂದಣಿ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪ್ರಜಾಸೇವೆ ಕಾರ್ಯಕ್ರಮ ಆಯೋಜಿಸಲು ದಿನಾಂಕ, ವೇಳಾಪಟ್ಟಿ, ಸ್ಥಳ ನಿಗದಿ ಸೇರಿದಂತೆ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.