ಕೂಡ್ಲಿಗಿ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆ ಉದ್ದೇಶಿಸಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಮಾತನಾಡಿದರು. ತಹಸೀಲ್ದಾರರಾದ ವಿ.ಕೆ. ನೇತ್ರಾವತಿ, ಜಿ.ಕೆ. ಅಮರೇಶ್, ತಾಪಂ ಇಒಗಳಾದ ನರಸಪ್ಪ, ಕೊಟ್ಟೂರಿನ ಬಿ. ಆನಂದ್ ಕುಮಾರ್ ಇದ್ದರು.
- ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಹೇಳಿಕೆ
- ಪ್ರಗತಿ ಪರಿಶೀಲನಾ ಸಭೆ
ತಾಲೂಕನ್ನು ಬರ ಪೀಡಿತವೆಂದು ಘೋಷಿಸಲು ತೀವ್ರ ಪ್ರಯತ್ನ ನಡೆಸಲಾಯಿತು. ಆದರೆ ತಾಂತ್ರಿಕ ಕಾರಣದಿಂದ ಅದು ಸಾಧ್ಯವಾಗಲಿಲ್ಲ ಎಂದು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಹೇಳಿದರು.
ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನಲ್ಲಿ ತೀವ್ರ ಬರವಿದೆ. ಆದರೆ ನಿಯಮಗಳಂತೆ ಶೇ.47ಕ್ಕಿಂತ ಹೆಚ್ಚು ಮಳೆಯಾಗಿದ್ದು, ಅಧಿಕ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇದರಿಂದ ತಾಲೂಕನ್ನು ಬರ ಪಟ್ಟಿಯಿಂದ ಕೈಬಿಡಲಾಗಿದೆ. ಶೀಘ್ರವೇ ಕೂಡ್ಲಿಗಿ ಹಾಗೂ ಕೊಟ್ಟೂರು ತಾಲೂಕು ಬರ ಪಟ್ಟಿಗೆ ಸೇರ್ಪಡೆಯಾಗಲಿವೆ ಎಂದು ತಿಳಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ತೇಜಾವರ್ಧನ್ ಮಾತನಾಡಿ, ಜೂನ್‌ನಲ್ಲಿ ಶೇ.67ಕ್ಕಿಂತ ಹೆಚ್ಚು ಕೊರತೆ ಇತ್ತು. ಆಗಸ್ಟ್ ತಿಂಗಳಲ್ಲಿ ಮಳೆಯಾಗಿದ್ದರಿಂದ ಅದು ಶೇ.47ಕ್ಕೆ ಇಳಿಕೆಯಾಗಿದೆ. ತಾಲೂಕಿನಲ್ಲಿ 48 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, 45 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಆದರೆ ಮಳೆ ಕೊರತೆಯಿಂದ ಫಸಲು ಬರುವುದು ಕಷ್ಟ ಎಂದು ಹೇಳಿದರು.
ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಮಾತನಾಡಿ, ತಾಲೂಕಿನಲ್ಲಿ 52 ಸಾವಿರ ಜಾನುವಾರುಗಳು ಹಾಗೂ 2.47 ಲಕ್ಷ ಕುರಿ-ಮೇಕೆಗಳಿವೆ. ನಮ್ಮ ಸಮೀಕ್ಷೆಯಿಂದ ಇನ್ನು 22 ವಾರಕ್ಕಾಗುವಷ್ಟಿ ಮೇವು ಸಂಗ್ರವಿದೆ ಎಂದು ಮಾಹಿತಿ ನೀಡಿದರು.
ಅಡವಿ ಸೂರವ್ವನಹಳ್ಳಿ ಸೇರಿದಂತೆ ಕೆಲ ಗ್ರಾಮಗಳಲ್ಲಿ ಕುಡಿವ ನೀರಿಗೆ ತೊಂದರೆ ಇದೆ. ಆದರೆ ಪಾವಗಡ ಸ್ಕೀಂಲ್ಲಿ ನೀರು ಪೂರೈಕೆ ಮಾಡುವುದರ ಜತೆಗೆ ಸ್ಥಳೀಯ ಕೊಳವೆ ಬಾವಿಗಳ ಮೂಲಕ ಸರಬರಾಜು ಮಾಡಲಾಗುತ್ತದೆ. ಪೂಜಾರಹಳ್ಳಿಯಲ್ಲಿ ಕೊಳವೆ ಬಾವಿಯ ವೈರ್ ಕಿತ್ತುಕೊಂಡು ಹೋಗಿದ್ದು, ಪೈಪ್‌ಲೈನ್ ಹಾಳು ಮಾಡಿದ್ದಾರೆ. ಪಿಡಿಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ಗ್ರಾಮೀಣ ಕುಡಿಯುವ ನೀರು ಇಲಾಖೆ ಎಇಇ ಪ್ರಸನ್ನ ಶಾಸಕರ ಗಮನಕ್ಕೆ ತಂದರು.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ 12ರಿಂದ 13 ಸಾವಿರ ನಿವೇಶನ ನೀಡುವ ಗುರಿ ಹೊಂದಲಾಗಿದ್ದು, ಎಲ್ಲ ಗ್ರಾಮಗಳಲ್ಲಿಯೂ ಸರ್ಕಾರಿ ಜಾಗ ಗುರುತಿಸಬೇಕು. ಯಾವುದೇ ಪ್ರಭಾವಕ್ಕೂ ಮಣಿಯದೆ ಗ್ರಾಮಗಳ ಪಕ್ಕದಲ್ಲಿಯೇ ಇರುವ ವಾಸ ಯೋಗ್ಯ ಜಮೀನನ್ನು ಗುರುತಿಸಬೇಕು ಎಂದು ವಿಎ ಹಾಗೂ ಪಿಡಿಒಗಳಿಗೆ ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಸೂಚಿಸಿದರು.
ಕೂಡ್ಲಿಗಿ-ಕೊಟ್ಟೂರು ತಹಸೀಲ್ದಾರರಾದ ವಿ.ಕೆ. ನೇತ್ರಾವತಿ, ಜಿ.ಕೆ. ಅಮರೇಶ್, ತಾಪಂ ಇಒಗಳಾದ ನರಸಪ್ಪ, ಬಿ. ಆನಂದ್ ಕುಮಾರ್, ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒ ಹಾಗೂ ವಿಎಗಳು ಇದ್ದರು.