E Attendance 
ಬಳ್ಳಾರಿ

ಇ-ಹಾಜರಾತಿಗೆ ಪ್ರಾಧ್ಯಾಪಕರ ಕಳ್ಳಾಟ

ಶಶಿಧರ ಎಲ್

ಪ್ರಮುಖ ಮುಖ್ಯಾಂಶಗಳು

  • ಗೈರು ಹಾಜರಿಗೆ ಕಡಿವಾಣ ಹಾಕುವ ಉದ್ದೇಶ
  • ಸರ್ಕಾರದ ಆದೇಶಕ್ಕಿಲ್ಲ ಕಿಮ್ಮತ್ತು
  • ಕೆಲ ಪ್ರಾಧ್ಯಾಪಕರು ಖಾಸಗಿ ಕಾಲೇಜುಗಳಲ್ಲಿ ಕಾರ್ಯ
ತಾಳೂರು ಎಸ್. ಎರ‌್ರಿಸ್ವಾಮಿ ಬಳ್ಳಾರಿ
ರಾಜ್ಯದ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು-ಕಚೇರಿಗಳಲ್ಲಿ ಬೋಧಕ-ಬೋಧಕೇತರ ಸಿಬ್ಬಂದಿಗೆ ಆಧಾರ್ ಸಂಯೋಜಿತ ಬಯೋಮೆಟ್ರಿಕ್ ವ್ಯವಸ್ಥೆ ಮೂಲಕ ಇ-ಹಾಜರಾತಿ ಅಳವಡಿಸಿಕೊಳ್ಳುವಂತೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಕೆಲ ಕಾಲೇಜುಗಳ ನೂರಾರು ಪ್ರಾಧ್ಯಾಪಕರು ಆ್ಯಪ್ ಡೌನ್‌ಲೋಡ್ ಮಾಡದೆ ಅಸಡ್ಡೆ ತೋರುತ್ತಿದ್ದಾರೆ.
ರಾಜ್ಯದಲ್ಲಿರುವ 432 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 3500 ಕಾಯಂ ಪ್ರಾಧ್ಯಾಪಕರು ಹಾಗೂ ಸಾವಿರಾರು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿನಾಕಾರಣ ಗೈರುಹಾಜರಿಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ತಂತ್ರಾಂಶ ಜಾರಿಗೊಳಿಸಿ ಎರಡು ತಿಂಗಳಾದರೂ ಸರ್ಕಾರದ ಆದೇಶಕ್ಕೆ ಕಿಮ್ಮತ್ತಿಲ್ಲ.
ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಏಳು ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ (ಬೆಂಗಳೂರು), ಮೈಸೂರು, ಮಂಗಳೂರು, ಶಿವಮೊಗ್ಗ, ಧಾರವಾಡ ಹಾಗೂ ಕಲುಬರಗಿ ಕಚೇರಿ ವ್ಯಾಪ್ತಿಯಲ್ಲಿ ಈ ವ್ಯವಸ್ಥೆ ಜಾರಿಗೆ ತಂದಿದೆ. ಆದರೆ, ಕೆಲ ಪ್ರಾಧ್ಯಾಪಕರು ಖಾಸಗಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುವುದರಿಂದ ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ ಸರ್ಕಾರಿ ಕಾಲೇಜಿನಲ್ಲಿ ಹಾಜರಾತಿ ಕಡಿತವಾಗಲಿದೆ ಎಂಬ ಉದ್ದೇಶದಿಂದ ತಾಂತ್ರಿಕ ನೆಪವೊಡ್ಡಿ ಅಸಡ್ಡೆ ತೋರುತ್ತಿದ್ದಾರೆ. ನಿತ್ಯವೂ ಇಲಾಖೆಯಿಂದ ಗ್ರೂಪ್‌ನಲ್ಲಿ ಆದೇಶಿಸಿದರೂ ಸ್ಪಂದಿಸುತ್ತಿಲ್ಲ ಎಂಬುದಾಗಿ ಪ್ರಾಂಶುಪಾಲರೊಬ್ಬರು ತಿಳಿಸಿದರು.

ಮೊಬೈಲ್‌ನಲ್ಲಿ ಆಧಾರ್ ಸಂಯೋಜಿತ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ

ಸರ್ಕಾರಿ ಕಾಲೇಜು-ಕಚೇರಿ ಸಿಬ್ಬಂದಿ ಕಾಲೇಜಿಗೆ ಬಾರದೆ ಕರ್ತವ್ಯದಲ್ಲಿ ಸೋಮಾರಿತನ ತೋರುತ್ತಿರುವ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಪ್ರಾಧ್ಯಾಪಕರ ಮೊಬೈಲ್‌ನಲ್ಲಿ ಆಧಾರ್ ಸಂಯೋಜಿತ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ (ಎಬಿಎಎಸ್) ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ನಿತ್ಯವೂ ಕಾಲೇಜು ವ್ಯಾಪ್ತಿಯ ನೂರು ಮೀಟರ್ ಅಂತರದಲ್ಲಿ ಹಾಜರಾತಿ ಹಾಕಲು ಅವಕಾಶವಿದೆ. ಕೆಲವೊಂದು ಬಾರಿ ಕಚೇರಿ ಕೆಲಸ ಹಾಗೂ ತುರ್ತು ಪರಿಸ್ಥಿತಿಗೆ ತೆರಳುವ ವೇಳೆ ಪ್ರಾಂಶುಪಾಲರಿಗೆ ಕಡ್ಡಾಯವಾಗಿ ತಿಳಿಸಿ, ದಾಖಲಾತಿ ಪುಸ್ತಕದಲ್ಲಿ ಕಾರಣ ಬರೆಯಬೇಕು. ಈ ವ್ಯವಸ್ಥೆಯ ಉಸ್ತುವಾರಿಗೆ ನೋಡಲ್ ಆಡ್ಮಿನ್ ನೇಮಿಸಲಾಗಿದೆ.
ನಿತ್ಯ ಏಳು ತಾಸು ಕಾಲೇಜಿನಲ್ಲಿರಬೇಕು. ಇದು ಮುಂದಿನ ದಿನಗಳಲ್ಲಿ ಎಚ್‌ಆರ್‌ಎಂಎಸ್ ತಂತ್ರಾಂಶಕ್ಕೆ ಒಳಪಡುವುದರಿಂದ ಗೈರಾದರೆ ಪ್ರಾಧ್ಯಾಪಕರ ವೇತನ ಕಡಿತಗೊಳ್ಳಲಿದೆ. ಸದ್ಯ, ಇದು ಕೇವಲ ಕಾಯಂ ಬೋಧಕ ಸಿಬ್ಬಂದಿಗೆ ಮಾತ್ರ ಜಾರಿಗೊಳಿಸಿದ್ದು, ಇನ್ನೂ ಅತಿಥಿ ಉಪನ್ಯಾಸಕರು ಹಾಗೂ ಹೊರ ಗುತ್ತಿಗೆ ನೌಕರರಿಗೆ ಅನ್ವಯವಾಗಿಲ್ಲ.
ಇನ್ನೂ ಇ-ಹಾಜರಾತಿಗೆ ಸಂಬಂಧಿಸಿ ಕೆಲ ಪ್ರಾಧ್ಯಾಪಕರ ಮೊಬೈಲ್‌ಗಳಲ್ಲಿ ಹ್ಯಾಂಗಿಂಗ್, ಎರರ್, ಸಿಗ್ನಲ್ ಸಮಸ್ಯೆ ಕಾಡುತ್ತಿದೆ. ಅಲ್ಲದೆ, ಆಧಾರ್ ಬೇಸ್ಡ್ ಐ ಬ್ಲಿಂಕ್‌ಗೊಂಡು ಮಾತ್ರ ಹಾಜರಾತಿ ದಾಖಲಾಗಲಿದೆ. ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಪ್ರತಿ ಕಾಲೇಜುಗಳಿಗೆ ಬಯೋಮೆಟ್ರಿಕ್ ಅಳವಡಿಕೆಗೆ ಸರ್ಕಾರ ಮುಂದಾಗಿಲ್ಲ. ಇದರಿಂದ ಕೆಲ ಪ್ರಾಧ್ಯಾಪಕರು ತಾಂತ್ರಿಕ ನೆಪವೊಡ್ಡಿ ತಪ್ಪಿಸಿಕೊಳ್ಳುತ್ತಿದ್ದಾರೆ.

ಕಕ ಭಾಗದಲ್ಲಿ ಮಾತ್ರ ಅನುಷ್ಠಾನ

ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿ ಎರಡೂ ತಿಂಗಳಾಗಿದೆ. ಆದರೆ, ಬೆಂಗಳೂರು, ಚೆನ್ನಪಟ್ಟಣ, ಕನಕಪುರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಮೈಸೂರು, ಹಾಸನ, ಮಂಡ್ಯ, ಶಿಕಾರಿಪುರ, ಚಿತ್ರದುರ್ಗ, ಚಿಕ್ಕಮಗಳೂರು, ಧಾರವಾಡ, ಬಾಗಲಕೋಟೆ ಸೇರಿ ಒಟ್ಟು 558ಕ್ಕೂ ಅಧಿಕ ಪ್ರಾಧ್ಯಾಪಕರು ಹಾಗೂ ಎರಡೂ ನೂರಕ್ಕೂ ಅಧಿಕ ಸಿಬ್ಬಂದಿ ಇನ್ನೂ ಅಳವಡಿಸಿಕೊಂಡಿಲ್ಲ. ಕೇವಲ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಕಾಲೇಜುಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸಮರ್ಪಕ ಅನುಷ್ಠಾನಗೊಂಡಿದೆ. ರಾಜ್ಯ ಸರ್ಕಾರ ಅಂಥವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ.

ನಿತ್ಯವೂ ಬೋಧಕ-ಬೋಧಕೇತರ ಸಿಬ್ಬಂದಿ ಇ-ಹಾಜರಾತಿಯಲ್ಲಿ ನೋಂದಯಿಸಲಾಗುತ್ತಿದೆ. ಇನ್ನೂ ಅತಿಥಿ ಉಪನ್ಯಾಸಕರಿಗೆ ಜಾರಿಗೊಳಿಸಿಲ್ಲ.