ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮದ ಜಮೀನಿಗೆ ಡಿಸಿ ಕೆ.ನಾಗೇಂದ್ರ ಪ್ರಸಾದ್ ಭೇಟಿ ನೀಡಿ ಮಣ್ಣಿನ ತೇವಾಂಶ ಪರಿಶೀಲಿಸಿದರು. ಕೃಷಿ ಇಲಾಖೆ ಜಿಂಟಿ ನಿರ್ದೇಶಕ ಕೆ.ಎಂ.ಸೋಮಸುಂದರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ್, ಉಪ ನಿರ್ದೇಶಕ ಎಸ್.ಎನ್.ಮಂಜುನಾಥ್, ಸಹಾಯಕ ಕೃಷಿ ನಿರ್ದೇಶಕ ಗರ್ಜಪ್ಪ ಇತರರಿದ್ದರು.  
ಬಳ್ಳಾರಿ

ಪರ್ಯಾಯ ಬೆಳೆಗೆ ಅದ್ಯತೆ ವಹಿಸಿ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿ
ಬಳ್ಳಾರಿ : ರಾಜ್ಯದಲ್ಲಿ ಹವಾಮಾನ ಬದಲಾವಣೆಯ ಪರಿಣಾಮದಿಂದ ಜಲಾನಯನ ಪ್ರದೇಶಗಳಲ್ಲಿ ನಿರೀಕ್ಷಿತ ಮಳೆಯಾಗಿಲ್ಲ ಎಂದು ಡಿಸಿ ಕೆ.ನಾಗೇಂದ್ರ ಪ್ರಸಾದ್ ಹೇಳಿದರು.
ತಾಲೂಕಿನ ಹಲಕುಂದಿ, ಮಿಂಚೇರಿ ಹಾಗೂ ಸಂಜಿರಾಯನಕೋಟೆ ಗ್ರಾಮಗಳ ಕೃಷಿ ಜಮೀನುಗಳಿಗೆ ಮುಂಗಾರು ಮಳೆ ಕೊರತೆ ಹಿನ್ನೆಲೆ ಭೇಟಿ ನೀಡಿ ಬೆಳೆಗಳ ಪರಿಸ್ಥಿತಿ ಪರಿಶೀಲಿಸಿ ಮಾತನಾಡಿದರು. ತುಂಗಭದ್ರ ಜಲಾಶಯದಿಂದ ಎಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿ ಕಾಲುವೆಗೆ ನೀರು ಹರಿಸದ ಕಾರಣ ಸಿರಗುಪ್ಪ, ಕಂಪ್ಲಿ ಮತ್ತು ಬಳ್ಳಾರಿ ಭಾಗದಲ್ಲಿ ಭತ್ತದ ಬಿತ್ತನೆ ಸಾಧ್ಯವಾಗಿಲ್ಲ. ಹೀಗಾಗಿ ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕು ಹಾಗೂ ಪರ್ಯಾಯ ಬೆಳೆಗಳಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯ ನಾನಾ ಭಾಗಗಳಲ್ಲಿ ಕಳೆದ 25 ದಿನಗಳಿಂದ ಹನಿಯೂ ಮಳೆಯಾಗಿಲ್ಲ. ಶೇ.80ರಷ್ಟು ಕೃಷಿ ಭೂಮಿಯಲ್ಲಿ ಬಿತ್ತನೆಯಾಗಿರುವ ತೊಗರಿ, ಸೂರ್ಯಕಾಂತಿ ಹಾಗೂ ಹತ್ತಿ ಬೆಳೆಗಳು ತೇವಾಂಶ ಅಭಾವದಿಂದ ಬಳಲುತ್ತಿವೆ. ಶೇ.100 ರಷ್ಟು ಬೆಳೆಯಬೇಕಿದ್ದ ಪ್ರದೇಶದಲ್ಲಿ ಕೇವಲ ಶೇ.30 ರಷ್ಟು ಮಾತ್ರ ಬೆಳೆದಿದೆ ಎಂದು ತಿಳಿಸಿದರು. ಸಿಎಂ ಆದೇಶದಂತೆ ತಾಲೂಕು ಮಟ್ಟದ ಅಧಿಕಾರಿಗಳ ತಂಡ ಫೀಲ್ಡ್‌ನಲ್ಲಿ ಪರಿಶೀಲನೆ ನಡೆಸುತ್ತಿದ್ದು, ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು. ಕೇಂದ್ರದ ಡ್ರಾಟ್ ಮಾನಿಟರಿಂಗ್ ಸೆಲ್ ಮೂಲಕ ಹವಾಮಾನ ದತ್ತಾಂಶ ಹಾಗೂ ಒಣ ಹವೆ ಆಧಾರದ ಮೇಲೆ ಡ್ರಾಟ್ ಟ್ರಿಗರ್ ನಿಯಮಾವಳಿಗಳಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ತಾಲೂಕಿನ ಹಲಕುಂದಿ ಗ್ರಾಮದಲ್ಲಿ ಸ್ಪಾಂಜ್ ಐರನ್ ಕಾರ್ಖಾನೆ ದೂಳಿನಿಂದ ಬೆಳೆ ನಷ್ಟ ಮತ್ತು ಸಾರ್ವಜನಿಕರ ಉಸಿರಾಟದ ತೊಂದರೆಯಾಗುತ್ತಿದೆ. ಈಗಾಗಲೇ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಪರಿಶೀಲಿಸಿದ್ದಾರೆ. ತನಿಖಾ ವರದಿ ಬಂದ ತಕ್ಷಣ ಕಾನೂನು ಹಾಗೂ ನ್ಯಾಯಾಲಯದ ವ್ಯಾಪ್ತಿಯಲ್ಲಿ ರೈತರ ಹಿತರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
===