ಸಂಡೂರು ಎಪಿಎಂಸಿ ಬಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ರಕ್ಷಣೆ ಕಾರ್ಯಕ್ರಮವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸುಂಬೆ ಉದ್ಘಾಟಿಸಿದರು. ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷೆ ತ್ರಿವೇಣಿ ಪತ್ತಾರ್, ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಇಒ ಮಡಗಿನ ಬಸಪ್ಪ ಇತರರಿದ್ದರು.
ಸಂಡೂರು: ಮಕ್ಕಳಿಗೆ ಬದುಕುವ, ಅಭಿವೃದ್ಧಿ ಹೊಂದುವ, ರಕ್ಷಣೆ ಪಡೆಯುವ, ಭಾಗವಹಿಸುವ, ಪ್ರಶ್ನಿಸುವ ಹಕ್ಕಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಹೇಳಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಘಟಕ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಸಹಯೋಗದಲ್ಲಿ ಪಟ್ಟಣದ ಎಪಿಎಂಸಿ ಬಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳಿಗೆ ರಕ್ಷಣೆ ಇರಬೇಕು ಮತ್ತು ರಕ್ಷಣಾ ಅಭಿವೃದ್ಧಿ ಕೇಂದ್ರಗಳಾಗಬೇಕು. ಮಕ್ಕಳಿಗಾಗುವ ಕಿರುಕುಳ, ದೌರ್ಜನ್ಯ ತಡೆಗಟ್ಟಬೇಕು. ಆ ಹಿನ್ನೆಲೆಯಲ್ಲಿ ಗ್ರಾಪಂ ಮಟ್ಟದಲ್ಲಿ ಮಕ್ಕಳ ರಕ್ಷಣಾ ಘಟಕಗಳನ್ನು ಸ್ಥಾಪಿಸಿ ಗ್ರಾಮ ಸಭೆಗಳನ್ನು ನಡೆಸಲಾಗುತ್ತಿದೆ ಎಂದರು.
ಜಾತಿ ತಾರತಮ್ಯ ಹೋಗಲಾಡಿಸಿ ಮಕ್ಕಳನ್ನು ಗೌರವದಿಂದ ಕಾಣಬೇಕು. ಯಾವುದೇ ಮಕ್ಕಳು ಶಾಲೆಯಿಂದ ಹೊರಗುಳಿಯಬಾರದು. ಸಂಪದ್ಭರಿತ ತಾಲೂಕು ಆಗಿರುವುದರಿಂದ ಸರ್ಕಾರದಿಂದ ಬರುವ ಅನುದಾನದ ಜತೆಗೆ ಡಿಎಂಎಫ್, ಕೆಇಎಂಆರ್‌ಸಿ ಅನುದಾನದಿಂದ ಮಕ್ಕಳಿಗೆ ಸಮರ್ಪಕ ಸೌಲಭ್ಯ ಕಲ್ಪಿಸಬೇಕು. ಮಕ್ಕಳ ಮೇಲೆ ದೌರ್ಜನ್ಯ ನಡೆದರೆ, ಬಾಲ್ಯವಿವಾಹ ಕಂಡುಬಂದರೆ ಮಕ್ಕಳ ಸಹಾಯವಾಣಿಗೆ ದೂರು ನೀಡುವಂತೆ ತಿಳಿಸಿದರು.
ವಿದ್ಯಾರ್ಥಿಗಳಿಂದ ದೂರು
ಕೆಲ ವಿದ್ಯಾರ್ಥಿಗಳು ಮಾತನಾಡಿ, ಶಾಲೆಯಲ್ಲಿ ಕೊಠಡಿಗಳ ಸಮಸ್ಯೆಯಿದ್ದು, ಕಿಡಿಗೇಡಿಗಳು ಶಾಲಾವರಣ, ಹಾಸ್ಟೆಲ್‌ಗಳಲ್ಲಿ ಮದ್ಯದ ಬಾಟಲ್‌ಗಳನ್ನು ಎಸೆದು ಹೋಗುತ್ತಾರೆ ಎಂದು ದೂರಿದರು. ಇನ್ನು ಕೆಲವರು ಸುಶೀಲಾನಗರ, ಸಿದ್ದಾಪುರ, ವೆಂಕಟಗಿರಿ, ಬಂಡ್ರಿ, ತಾರಾನಗರ ಮತ್ತಿತರ ಗ್ರಾಮಗಳಿಂದ ತಾಲೂಕು ಕೇಂದ್ರಕ್ಕೆ ಬಸ್ ಸೌಲಭ್ಯವಿಲ್ಲ ಎಂದು ತಿಳಿಸಿದರು.
ಅಧ್ಯಕ್ಷ ಶಶಿಧರ ಕೋಸಂಬೆ ಪ್ರತಿಕ್ರಿಯಿಸಿ, ಶಾಲೆ ಮತ್ತು ವಸತಿನಿಲಯಗಳ ಬಳಿ ಬಂದೋಬಸ್ತ್ ಕಲ್ಪಿಸುವಂತೆ ಪಿಎಸ್‌ಐ ಡಾಕೇಶನಾಯ್ಕಗೆ ಹಾಗೂ ಶಾಲೆಯಲ್ಲಿ ಕೊಠಡಿಗಳು ಹಾಗೂ ಬಸ್‌ಸೌಲಭ್ಯ ಕಲ್ಪಿಸುವಂತೆ ಬಿಇಒ ಡಾ.ಐ.ಆರ್.ಅಕ್ಕಿ, ಡಿಪೋ ವ್ಯವಸ್ಥಾಪಕ ಲಕ್ಷ್ಮಣಗೆ ಸೂಚಿಸಿದರು. ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿ ಸುಭದ್ರಾ ದೇವಿ, ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷೆ ತ್ರಿವೇಣಿ ಪತ್ತಾರ್, ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಇಒ ಮಡಗಿನ ಬಸಪ್ಪ, ಸಿಡಿಪಿಒ ಪಿ.ನಾಗರಾಜ, ಸಮಾಜ ಕಲ್ಯಾಣ ಇಲಾಖೆ ಎಡಿ ಎನ್.ಕೆ.ವೆಂಕಟೇಶ, ಎಸ್ಟಿ ಕಲ್ಯಾಣಾಧಿಕಾರಿ ರಂಗನಾಥ್, ಪುರಸಭೆ ಮುಖ್ಯಾಧಿಕಾರಿ ವಿನಯ್ ಕುಮಾರ ಗೌಡ ಇತರರಿದ್ದರು.