ಸಿರಗುಪ್ಪ ತಾಲೂಕು ಕ್ರೀಡಾಂಗಣದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಮೂರನೇ ಹಂತದ ಜಲ-ಜನಜಾಗೃತಿ ರಥಯಾತ್ರೆಗೆ ಗಣ್ಯರು ಚಾಲನೆ ನೀಡಿದರು. 
ಬಳ್ಳಾರಿ

ಜೀವಜಲದ ಸಂರಕ್ಷಣೆ ನಮ್ಮೆಲ್ಲರ ಹೊಣೆ

ಅಶೋಕ್ ಕುಮಾರ್ ಎನ್
ಸಿರಗುಪ್ಪ: ಕೋಟ್ಯಂತರ ಜನರ ಜೀವನಾಡಿ ತುಂಗಭದ್ರಾ ನದಿ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬುದು ಆತಂಕಕಾರಿಯಾಗಿದೆ. ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಹಳೇಕೋಟೆ ಮರಿಶಿವಯೋಗಿಗಳ ಮಠದ ಉತ್ತರಾಧಿಕಾರಿ ಸಿದ್ದಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ತಾಲೂಕು ಕ್ರಿಡಾಂಗಣದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಮೂರನೇ ಹಂತದ ಜಲ-ಜನ ಜಾಗೃತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಹಣ ನೀಡಿ ನೀರಿನ ಬಾಟಲ್ ಖರೀದಿಸುವ ಪರಿಸ್ಥಿತಿ ಬಂದಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಜಲಮೂಲಗಳನ್ನು ಕಲುಷಿತ ಮಾಡಿದರೆ ಕುಡಿಯಲು ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಜೀವ ಜಲವನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

ಬಸವ ಬಳಗದ ಬಸವಭೂಷಣ ಸ್ವಾಮೀಜಿ ಮಾತನಾಡಿ, ಭೂಮಿಯಲ್ಲಿ ವಾಸಿಸುವ ಪ್ರತಿಯೊಂದು ಜೀವಿಗಳಿಗೆ ಜಲವೇ ಮೂಲವಾಗಿದ್ದು, ಮುಂದಿನ ಪೀಳಿಗೆಗಾಗಿ ಜಲವನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ದೇಶದ ಅನೇಕ ನದಿಗಳು ನಮ್ಮೆಲ್ಲರ ಅಜಾಗರೂಕತೆಯಿಂದಾಗಿ ಕಲುಷಿತವಾಗುತ್ತಿವೆ. ಇದೇ ರೀತಿ ನಿರ್ಲಕ್ಷೃ ಮುಂದುವರಿದರೆ ಮುಂದಿನ ದಿನಗಳಲ್ಲಿ ನಮಗೆ ಕುಡಿಯಲು ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ. ನಾವೆಲ್ಲರೂ ಎಚ್ಚರ ವಹಿಸಿ ಎಲ್ಲ ಜಲಮೂಲಗಳನ್ನು ಸಂರಕ್ಷಿಸಲು ಮುಂದಾಗಬೇಕೆಂದು ಹೇಳಿದರು.
ಪಟ್ಟಣದ ಕೈವಲ್ಯಾನಂದ ಸ್ವಾಮೀಜಿ, ಮಾಜಿ ಶಾಸಕರಾದ ಟಿ.ಎಂ.ಚಂದ್ರಯ್ಯಸ್ವಾಮಿ, ಎಂ.ಎಸ್.ಸೋಮಲಿಂಗಪ್ಪ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಆರ್.ಮಾಧವರೆಡ್ಡಿ, ವಿಶ್ವಜ್ಯೋತಿ ವಿದ್ಯಾಸಂಸ್ಥೆ ಅಧ್ಯಕ್ಷ ಆರ್.ಬಸವಲಿಂಗಪ್ಪ, ವಾಲ್ಮೀಕಿ ವಿದ್ಯಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಬಿ.ಎಂ.ಸತೀಶ, ಕಸಾಪ ತಾಲೂಕು ಅಧ್ಯಕ್ಷ ಮಧುಸೂದನ ಕಾರಿಗನೂರು, ಪ್ರಮುಖರಾದ ಎಚ್.ಕೆ.ಮಲ್ಲಿಕಾರ್ಜುನಸ್ವಾಮಿ, ಬೇವೂರು ಬಸವನಗೌಡ, ನರಸಿಂಹನಾಯಕ, ಜೆ.ನರಸಿಂಹಮೂರ್ತಿ, ನಜೀರ್ ಅಹಮ್ಮದ್, ಲೋಕೇಶ, ದೊಡ್ಡನಗೌಡ, ಚೆನ್ನಪ್ಪ, ಮಹದೇವ, ಮುದುಕಪ್ಪ, ಪಟ್ಟಣದ ವಿವಿಧ ಶಾಲೆಯ ವಿದ್ಯಾರ್ಥಿಗಳು ಇದ್ದರು.