ಬಳ್ಳಾರಿ ಪಾಲಿಕೆಯ ವಲಯ ಕಚೇರಿ ಮುಂಭಾಗದಲ್ಲಿ ಹೆಲ್ಮೆಟ್ ಧರಿಸದೆ ಬೈಕ್ ಚಲಿಸುತ್ತಿದ್ದ ಸವಾರರನನ್ನು ತಡೆಯುತ್ತಿರುವ ಪೊಲೀಸರು. 
ಬಳ್ಳಾರಿ

ದಂಡ ವಿಧಿಸಿ ಎಚ್ಚರಿಸಿದ ಪೊಲೀಸರು

ಪ್ರಮುಖ ಮುಖ್ಯಾಂಶಗಳು

  • ಹೆಲ್ಮೆಟ್ ಜಾಗೃತಿ ಅಭಿಯಾನ
  • ಸಾರ್ವಜನಿಕರಿಗೆ ಅರಿವು
ಬಳ್ಳಾರಿ : ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯೂ ರಸ್ತೆ ಅಪಘಾತಗಳಿಂದ ಪ್ರಾಣಹಾನಿ ತಡೆಗಟ್ಟುವ ಉದ್ದೇಶದಿಂದ ಜೂ.1ರಿಂದ ಹೆಲ್ಮೆಟ್ ಕಡ್ಡಾಯಗೊಳಿಸಿದ್ದು, ನಿಯಮ ಉಲ್ಲಂಘಿಸಿದವರಿಗೆ ಸೋಮವಾರ ದಂಡ ವಿಧಿಸಿ ಬಿಸಿ ಮುಟ್ಟಿಸಿತು.
ಇಲ್ಲಿನ ಗಡಗಿ ಚನ್ನಪ್ಪ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿದರು. ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಬಳಸಿ ಎಂಬುದಾಗಿ ತಿಳಿಸಿದರು. ನಿಯಮ ಉಲ್ಲಂಘಿಸಿದ ಹಲವಾರು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು, ಹೆಲ್ಮೆಟ್ ಖರೀದಿಸಿ ಧರಿಸಿದ ಬಳಿಕವೇ ವಾಹನಗಳನ್ನು ಮಾಲೀಕರಿಗೆ ನೀಡಿದರು. ಕೆಲ ವಾಹನ ಸವಾರರಿಗೆ 500 ರೂ. ದಂಡ ವಿಧಿಸಿ ಎಚ್ಚರಿಸಿದರು.
ಪೊಲೀಸ್ ಇಲಾಖೆಯು ಕಳೆದ ಒಂದು ತಿಂಗಳಿನಿಂದ ನಗರದ ಸೇರಿದಂತೆ ಜಿಲ್ಲಾದ್ಯಂತ ಹೆಲ್ಮೆಟ್ ಜಾಗೃತಿ ಅಭಿಯಾನ ನಡೆಸಿ, ಹೆಲ್ಮೆಟ್ ಧರಿಸುವ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿತು. ಶಾಲಾ ಕಾಲೇಜು, ಸಾರ್ವಜನಿಕ ಸ್ಥಳ ಹಾಗೂ ಪ್ರಮುಖ ವೃತ್ತಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಆದರೂ, ಸಾಕಷ್ಟು ಜಾಗೃತಿ ಮೂಡಿಸಿದ ಬಳಿಕವೂ ಅನೇಕರು ನಿಯಮ ಪಾಲಿಸದಿರುವುದು ಇಲಾಖೆಯ ಅಸಮಾಧಾನಕ್ಕೆ ಕಾರಣವಾಗಿದೆ.
ಕಾರ್ಯಾಚರಣೆ ವೇಳೆ ಕೆಲ ವಾಹನ ಸವಾರರು ಪೊಲೀಸರ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಅಗತ್ಯ ಎಂಬುದಾಗಿ ಅಭಿಪ್ರಾಯಪಟ್ಟರು. ದಂಡ ವಿಧಿಸುವುದು ನಮ್ಮ ಉದ್ದೇಶವಲ್ಲ. ಜನರ ಜೀವ ರಕ್ಷಣೆ ಮುಖ್ಯ. ಹೆಲ್ಮೆಟ್ ಧರಿಸುವ ಮೂಲಕ ಅನೇಕ ಅಮೂಲ್ಯ ಜೀವಗಳನ್ನು ಉಳಿಸಬಹುದು. ಆದ್ದರಿಂದ ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿ ವಾಹನ ಚಲಾಯಿಸಬೇಕು ಎಂದು ಪೊಲೀಸ್ ಅಧಿಕಾರಿಗಳು ಮನವಿ ಮಾಡಿದರು.
ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ವಿಶೇಷ ತಪಾಸಣೆ ಮುಂದುವರಿಯಲಿದೆ. ರಸ್ತೆ ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಈ ಕಟ್ಟುನಿಟ್ಟಿನ ಕ್ರಮಕ್ಕೆ ಸಾರ್ವಜನಿಕರಿಂದಲೂ ಬೆಂಬಲ ವ್ಯಕ್ತವಾಯಿತು. ಪೊಲೀಸರು ದಂಡ ವಿಧಿಸಲು ಮುಂದಾದ ವೇಳೆ ಕೆಲ ಸವಾರರು ರಾಜಕೀಯ ಮುಖಂಡರು, ಪ್ರಭಾವಿ ನಾಯಕರು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಬೈಕ್ ಬಿಡಿಸುವಂತೆ ಕೇಳಿಕೊಳ್ಳುತ್ತಿರುವುದು ಕಂಡು ಬಂತು.