ಬಳ್ಳಾರಿಯ ಕುಡುತಿನಿ ರಸ್ತೆಯ ಬಂಕ್‌ನಲ್ಲಿ ಪೆಟ್ರೋಲ್ ಖಾಲಿಯಾಗಿರುವುದು.
ಬಳ್ಳಾರಿ : ಕಳೆದ ಕೆಲವು ದಿನಗಳ ಹಿಂದೆ ಅಡುಗೆ ಅನಿಲ ಮತ್ತು ಕಮರ್ಷಿಯಲ್ ಗ್ಯಾಸ್‌ಗಾಗಿ ಪರದಾಡುತ್ತಿದ್ದ ಜನರಿಗೆ ಇದೀಗ ‘ಪೆಟ್ರೋಲ್’ ಅಭಾವ ಕಾಡುತ್ತಿದೆ. ನಗರದ ಹೊರವಲಯದ ಬಂಕ್‌ಗಳಲ್ಲಿ ಕಳೆದ ಕೆಲ ದಿನದಿಂದ ಪೆಟ್ರೋಲ್ ಖಾಲಿಯಾದ ಪರಿಣಾಮ ವಾಹನ ಸವಾರರು ಹೈರಾಣಗಿದ್ದಾರೆ.
ಕಳೆದ ಮೂರ‌್ನಾಲ್ಕು ದಿನಗಳಿಂದ ನಗರದ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ‘ನೋ ಸ್ಟಾಕ್’ ಬೋರ್ಡ್‌ಗಳು ರಾರಾಜಿಸುತ್ತಿವೆ. ಅದರಲ್ಲೂ ಕುಡುತಿನಿ, ಅನಂತಪುರ ರಸ್ತೆ ಹಾಗೂ ಬೆಂಗಳೂರು ರಸ್ತೆಯ ಹೊರವಲಯದ ಬಂಕ್‌ಗಳಲ್ಲಿ ಪೆಟ್ರೋಲ್ ಸಿಗುತ್ತಿಲ್ಲ.
ಹೊರವಲಯದಲ್ಲಿ ವಾಹನ ನಿಂತು ಹೋದರೆ, ಸವಾರರು ಪೆಟ್ರೋಲ್‌ಗಾಗಿ ನಗರದ ಒಳಭಾಗಕ್ಕೆ ಬರಬೇಕಾದ ಅನಿವಾರ್ಯತೆ ಎದುರಾಗಿದೆ. ನಗರದ ಕೇವಲ ಬೆರಳೆಣಿಕೆಯಷ್ಟು ಬಂಕ್‌ಗಳಲ್ಲಿ ಮಾತ್ರ ಪೆಟ್ರೋಲ್ ಲಭ್ಯವಿದ್ದು, ಅಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿಯಿದೆ. ವಿಪರ್ಯಾಸವೆಂದರೆ, ಬಂಕ್‌ಗಳಲ್ಲಿ ಡೀಸೆಲ್ ಲಭ್ಯವಿದ್ದರೂ ಪೆಟ್ರೋಲ್ ಮಾತ್ರ ಖಾಲಿಯಾಗಿದೆ.
ಮುಂಗಡ ವ್ಯಯಿಸಿದರೆ ಮಾತ್ರ ಪೆಟ್ರೋಲ್ : ಕಳೆದ ಕೆಲ ವರ್ಷಗಳಿಂದ ನಗರದ ಎಚ್‌ಪಿ ಹಾಗೂ ಭಾರತ್ ಪೆಟ್ರೋಲ್ ಬಂಕ್‌ಗಳಿಗೆ ರಾಜ್ಯದ ಹಾಸನ ಹಾಗೂ ಮಂಗಳೂರುನಿಂದ ಅಮದು ಮಾಡಿಕೊಳ್ಳಲಾಗುತ್ತಿತ್ತು. ಪೆಟ್ರೋಲ್ ಸ್ಟಾಕ್ ಬರುವ ಒಂದು ದಿನ ಮುನ್ನವೇ ಡಿಡಿ ವಿತರಿಸಿದರೆ ಲಾರಿಗೆ ಪೆಟ್ರೋಲ್ ತುಂಬಿಸಿ ಕಳುಹಿಸಲಾಗುತ್ತಿತ್ತು. ಆದರೆ, ಇರಾನ್ ಹಾಗೂ ಇಸ್ರೇಲ್ ಯುದ್ಧದ ಪರಿಣಾಮದಿಂದ ಕಳೆದ ಕೆಲ ತಿಂಗಳಿಂದ ಮುಂಗಡವಾಗಿ ಹಣವನ್ನು ಆಯಾ ಸಂಬಂಧಪಟ್ಟ ಡಿಫೋ ಮಾಲೀಕರಿಗೆ ಹಣ ಆರ್‌ಟಿಜಿಎಸ್ ಮೂಲಕ ಹಣ ಪಾವತಿಸಿದರೆ ಮಾತ್ರ ಬಂಕ್‌ಗಳಿಗೆ ಪೆಟ್ರೋಲ್ ಪೂರೈಕೆಯಾಗಲಿದೆ. ಇದಲ್ಲದೆ, ಬ್ಯಾಂಕ್‌ಗಳಲ್ಲಿ ತಾಂತ್ರಿಕ ದೋಷದಿಂದ ಹಣ ಪಾವತಿ ವಿಳಂಬವಾದರೆ ನಿಗದಿಗಿಂತ ಎರಡ್ಮೂರು ದಿನದಷ್ಟು ಪೆಟ್ರೋಲ್ ಪೂರೈಕೆಯಾಗುವಲ್ಲಿ ವಿಳಂಬವಾಗಲಿದೆ ಎಂದು ಪೆಟ್ರೋಲ್ ಮಾಲೀಕ ಶಶಿಕುಮಾರ ಅಳಲು ತೋಡಿಕೊಂಡರು.
ಏಜೆನ್ಸಿ ಯಲ್ಲಿ ದರ ವ್ಯತ್ಯಾಸ : ಇನ್ನೊಂದೆಡೆ ಜಿಲ್ಲೆಯಲ್ಲಿ ಆಟೋಗಳಿಗೆ ಎಲ್‌ಪಿಜಿ ಗ್ಯಾಸ್ ಸರಬರಾಜು ಸುಧಾರಿಸಿರುವುದು ಸಮಾಧಾನದ ಸಂಗತಿಯಾದರೂ, ದರದ ವಿಚಾರದಲ್ಲಿ ಚಾಲಕರಿಗೆ ಹಗಲು ದರೋಡೆಯ ಬಿಸಿ ತಟ್ಟುತ್ತಿದೆ. ನಗರದ ವಿವಿಧ ಏಜೆನ್ಸಿಗಳು ತಮ್ಮಿಷ್ಟದಂತೆ ಬೆಲೆ ನಿಗದಿ ಮಾಡಿರುವುದು ಆಟೋ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿನ ಗಾಂಧಿನಗರದ ಗ್ಯಾಸ್ ಏಜೆನ್ಸಿಯಲ್ಲಿ ಲೀಟರ್ ಗೆ 98 ರೂ., ಎಂ.ಜಿ.. ಬಳಿಯಿರುವ ಏಜೆನ್ಸಿಯಲ್ಲಿ 110 ರೂ. ಹಾಗೂ ಎಪಿಎಂಸಿ ಬಳಿಯಲ್ಲಿನ ಏಜೆನ್ಸಿಯಲ್ಲಿ 120 ರೂ. ಲೀ. ದರ ನಿಗದಿ ಮಾಡಲಾಗಿದೆ. ಒಂದೇ ನಗರದಲ್ಲಿ ಲೀ. 20 ರಿಂದ 22 ರೂ. ವರೆಗೆ ವ್ಯತ್ಯಾಸ ಇರುವುದು ಚಾಲಕರ ನಿದ್ದೆಗೆಡಿಸಿದೆ ಎಂದು ಆಟೋ ರಮೇಶ್ ತಿಳಿಸಿದರು.
ಕೋಟ್.... ನಗರದ ಹೊರವಲಯದ ಬಂಕ್‌ಗಳಲ್ಲಿ ಪೆಟ್ರೋಲ್ ಖಾಲಿಯಾಗಿರುವುದಕ್ಕೆ ಆರ್‌ಟಿಜಿಎಸ್ ಮೂಲಕ ಪಾವತಿ ಮಾಡಿರುವುದಿಲ್ಲ. ಆಟೋ ಗ್ಯಾಸ್ ಏಜೆನ್ಸಿಯಲ್ಲಿ ದರ ವ್ಯತ್ಯಾಸ ಇರುವುದರ ಬಗ್ಗೆ ಪರಿಶೀಲಿಸಲಾಗುವುದು.
- ಕೆ.ದೇವರಾಜ್, ಉಪ ನಿರ್ದೇಶಕ, ಆಹಾರ ಇಲಾಖೆ, ಬಳ್ಳಾರಿ.