ಬಳ್ಳಾರಿಯ ಎಸ್ಪಿ ಕಚೇರಿಯಲ್ಲಿ ಗ್ರಾಹಕರ ಹಿತದೃಷ್ಟಿಯಿಂದ ವಿವಿಧ ಇ-ಸೇವಾ ವಲಯಗಳ ಮುಖ್ಯಸ್ಥರೊಂದಿಗೆ ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್ ಸಭೆ ನಡೆಸಿದರು. ಎಎಸ್ಪಿ ನವೀನ ಕುಮಾರ ಇದ್ದರು.
ಬಳ್ಳಾರಿ : ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಿಗ್ಗಿ, ಜೊಮ್ಯಾಟೊ, ಅಮೆಜಾನ್, ಬ್ಲಿಂಕಿಟ್ ಮತ್ತು ಖಾಸಗಿ ಸಾರಿಗೆ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯ ಪೂರ್ಣ ವಿವರ ಸಂಬಂಧಪಟ್ಟ ಠಾಣೆಗೆ ಸಲ್ಲಿಸುವುದು ಕಡ್ಡಾಯ ಎಂದು ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್ ಹೇಳಿದರು.
ನಗರದ ಎಸ್ಪಿ ಕಚೇರಿ ಸಭಾಂಗಣದಲ್ಲಿ ಡೆಲಿವರಿ ವೇಳೆ ಮಾದಕ ವಸ್ತು ಸಾಗಣೆ ಹಾಗೂ ನಿತ್ಯ ಚಟವಟಿಕೆಗಳ ಮೇಲೆ ನಿಗಾ ವಹಿಸಲು ಮತ್ತು ಗ್ರಾಹಕರ ಹಿತದೃಷ್ಟಿಯಿಂದ ವಿವಿಧ ಇ-ಸೇವಾ ವಲಯಗಳ ಮುಖ್ಯಸ್ಥರೊಂದಿಗೆ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಡೆಲಿವರಿ ಬಾಯ್ಸ ಮತ್ತು ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘಿಸದಂತೆ ಸಂಸ್ಥೆಗಳು ಎಚ್ಚರಿಕೆ ವಹಿಸಬೇಕು. ನಿಯಮಗಳನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ವಸ್ತುಗಳ ದಾಸ್ತಾನು ಹಾಗೂ ಪ್ಯಾಕಿಂಗ್ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ, ಬುಕ್ಕಿಂಗ್ ರಿಜಿಸ್ಟರ್ ನಿರ್ವಹಣೆ, ಸಂಸ್ಥೆಗಳು ಕಡ್ಡಾಯವಾಗಿ ಪರವಾನಗಿ ಹೊಂದಿರಬೇಕು. ಕೆಲವು ಡೆಲಿವರಿ ಸಂದರ್ಭದಲ್ಲಿ ಗ್ರಾಹಕರಿಗೆ ಆರ್ಡರ್ ಮಾಡಿದ ವಸ್ತುಗಳ ತಲುಪಿಸುವ ಜತೆಯಲ್ಲಿಯೇ ಇನ್ನಿತರ ವಸ್ತುಗಳನ್ನು (ಮಾದಕ) ತಲುಪಿಸುತ್ತಿರುವ ಬಗ್ಗೆ ಮಾಹಿತಿಯಿದ್ದು, ಹೀಗಾಗಿ ವಿಳಂಬವಾಗಿ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವ ಡೆಲಿವರಿ ಬಾಯ್ಸಗಳ ಮಾಹಿತಿಯನ್ನು ಕಡ್ಡಾಯವಾಗಿ ಜಿಲ್ಲಾ ಪೊಲೀಸ್ ಕಚೇರಿಗೆ ಸಲ್ಲಿಸಬೇಕು. ಡೆಲಿವರಿ ಪಾರ್ಸಲ್ ಗಳನ್ನು ಗ್ರಾಹಕರಿಗೆ ತಲುಪಿಸುವ ಸಮಯದಲ್ಲಿ, ವಸ್ತುಗಳ ಬಗ್ಗೆ ಅನುಮಾನ ಕಂಡು ಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.