ಕುರುಗೋಡು ಉತ್ಸವ ಹಿನ್ನೆಲೆಯಲ್ಲಿ ಮಹಿಳೆಯರು ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಭಾಗವಹಿಸಿರುವುದು.
ವಿರೂಪಾಕ್ಷಿ ಕಡ್ಲೆ ಕಲ್ಲುಕಂಬ
ಕುರುಗೋಡು: ತಾಲೂಕು ಘೋಷಣೆ ಬಳಿಕ ಇದೇ ಮೊದಲ ಬಾರಿಗೆ ಆಚರಿಸುತ್ತಿರುವ ಕುರುಗೋಡು ಉತ್ಸವದ ಮೊದಲ ದಿನ ಭಾನುವಾರ ಬೆಳಗಿನ ಜಾವದ ಹಲವು ಕಾರ್ಯಕ್ರಮದಲ್ಲಿ ಜನರಿಲ್ಲದೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹೆಚ್ಚಾಗಿ ಕಾಣಿಸಿಕೊಂಡರು.
ತಾಲೂಕಿನ 12, ಬಳ್ಳಾರಿ ಗ್ರಾಮೀಣ ಭಾಗದ 6 ಸೇರಿ ಒಟ್ಟು 18 ಗ್ರಾಪಂ ಒಳಗೊಂಡು ತಾಲೂಕು ಆಡಳಿತ ಉತ್ಸವ ಆಯೋಜಿಸಿದೆ. ತಾಲೂಕಿನಲ್ಲಿ ಸುಮಾರು 1.28 ಲಕ್ಷ ಜನರಿದ್ದಾರೆ.
ಕುರುಗೋಡು ಉತ್ಸವ ಹಿನ್ನೆಲೆಯಲ್ಲಿ ಪಟ್ಟಣದ ದೊಡ್ಡಬಸವೇಶ್ವರ ದೇವಾಲಯದ ಬಳಿ ವಾರಣಾಸಿ ಆರ್ಚಕರಿಂದ ವಿಶೇಷ ಆರತಿ ನೆರವೇರಿಸಲಾಯಿತು.
ಉತ್ಸವಕ್ಕೆ ಜನರನ್ನು ಕರೆತರಲು ಖಾಸಗಿ ಶಾಲೆಗಳ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಆಹ್ವಾನ ಪತ್ರಿಕೆಯಲ್ಲಿ ಕುರುಗೋಡಿನಲ್ಲಿ ಬೈ ಸ್ಕೈ ಕುರಿತು ಪ್ರಚಾರ ಮಾಡಲಾಗಿತ್ತು. ಮೊದಲ ಬಾರಿಗೆ ಹೆಲಿಕಾಪ್ಟರ್‌ನಲ್ಲಿ ಕುರುಗೋಡನ್ನು ಕಣ್ತುಂಬಿಕೊಳ್ಳುವ ಕಾತುರದಲ್ಲಿದ್ದ ಅನೇಕರಿಗೆ ಹೆಲಿಕಾಪ್ಟರ್ ಬಾರದೆ ನಿರಾಸೆ ಮೂಡಿಸಿತು. ಪಟ್ಟಣದ ಗಾದಿಲಿಂಗೇಶ್ವರ ಆಲಯದಿಂದ ಮುಖ್ಯ ವೃತ್ತದವರೆಗೂ ಗ್ರಾಮೀಣ ಭಾಗದ ಜೀವನಾಡಿ ಬಿತ್ತರಿಸುವ ಜನಪದ ಮರೆವಣಿಯಲ್ಲಿ ವಿವಿಧ ಕಲಾವಿದರು ಬಗೆ ಬಗೆಯ ಉಡುಗೆ ತೊಟ್ಟು ನೋಡುಗರ ಗಮನ ಸೆಳೆದರು. ಉತ್ಸವ ಹಿನ್ನಲೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ದರಿಂದ ಶಿವರಾತ್ರಿ ಹಬ್ಬಕ್ಕಾಗಿ ಅಗತ್ಯ ವಸ್ತುಗಳ ಖರೀದಿಗೆ ಜನರು ಪರದಾಡಿದರು.
ರಾರಾಜಿಸಿದ ಬಂಟಿಂಗ್ಸ್
ಬಳ್ಳಾರಿಯಲ್ಲಿ ಜ.1ರಂದು ನಡೆದ ಗಲಾಟೆ ಬಳಿಕ ಅನಧಿಕೃತ ಬ್ಯಾನರ್ ಸಂಸ್ಕೃತಿಗೆ ಜಿಲ್ಲಾಧಿಕಾರಿ ಆದೇಶ ಕಡಿವಾಣ ಹಾಕಿತ್ತು. ಆದರೆ ಪುರಸಭೆ ಅನುಮತಿ ಮೇರೆಗೆ ಪಟ್ಟಣ ಪ್ರಮುಖ ಬೀದಿ ಯಲ್ಲಿ ಶಾಸಕ ಗಣೇಶ್ ಭಾವ ಚಿತ್ರ ಇರುವ 1500 ಬಂಟಿಂಗ್ಸ್ ಹಾಗೂ 20 ಬ್ಯಾನರ್ ಹಾಕಿರುವುದು ಕಂಡು ಬಂತು.