- ಕನಿಷ್ಠ ವೇತನ ಪಾವತಿಸಲಿ
- ರಾಜ್ಯಾಧ್ಯಕ್ಷ ಎಚ್.ಚಂದ್ರಪ್ಪ ಆಗ್ರಹ
ಬಳ್ಳಾರಿ : ಅರಣ್ಯ ಇಲಾಖೆಯ ಪ್ರಾದೇಶಿಕ, ಸಾಮಾಜಿಕ ಹಾಗೂ ವನ್ಯಜೀವಿ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ದಿನಗೂಲಿ ಮತ್ತು ಹೊರಗುತ್ತಿಗೆ ಸಿಬ್ಬಂದಿಗೆ ರಾಜ್ಯ ಸರ್ಕಾರ ನಿಗದಿಪಡಿಸಿರುವ ಪರಿಷ್ಕೃತ ಕನಿಷ್ಠ ವೇತನ ಪಾವತಿಸಲಿ ಎಂದು ರಾಜ್ಯ ಅರಣ್ಯ ಇಲಾಖೆ ದಿನಗೂಲಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಗಳ ನೌಕರರ ಸಂಘದ ರಾಜ್ಯಾಧ್ಯಕ್ಷ ಎಚ್.ಚಂದ್ರಪ್ಪ ಆಗ್ರಹಿಸಿದರು.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಸರ್ಕಾರವು 2026ರ ಮೇ 22ರಂದು ಹೊರಡಿಸಿರುವ ಅಧಿಸೂಚನೆಯ ಮೂಲಕ ನಾನಾ ವರ್ಗದ ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಠ ವೇತನ ನಿಗದಿಪಡಿಸಿದೆ. ನ್ಯಾಯಾಲಯದ ನಿರ್ದೇಶನದ ಅನ್ವಯ ಈ ಪರಿಷ್ಕರಣೆ ಮಾಡಲಾಗಿದ್ದು, ಅರಣ್ಯ ಇಲಾಖೆಯ ದಿನಗೂಲಿ ಹಾಗೂ ಹೊರಗುತ್ತಿಗೆ ಸಿಬ್ಬಂದಿಗೂ ಅದೇ ಮಾದರಿಯಲ್ಲಿಯೇ ವೇತನ ಪಾವತಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ವಿವಿಧ ಅರಣ್ಯ ವಿಭಾಗಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಾವಿರಾರು ಸಿಬ್ಬಂದಿಗೆ ಪರಿಷ್ಕೃತ ವೇತನ ಇನ್ನೂ ಜಾರಿಯಾಗಿಲ್ಲ. ಸರ್ಕಾರದ ಅಧಿಸೂಚನೆಯು 2025ರ ಏ.11ರಿಂದಲೇ ಅನ್ವಯವಾಗುವಂತೆ ಸೂಚಿಸಿರುವ ಹಿನ್ನೆಲೆ ಸಂಬಂಧಿತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಬಾಕಿ ಸೇರಿದಂತೆ ಪರಿಷ್ಕೃತ ವೇತನ ಪಾವತಿಸಬೇಕು ಎಂದು ಆಗ್ರಹಿಸಿದರು. ಪದಾಧಿಕಾರಿಗಳಾದ ಶಿವಣ್ಣ, ಅಂಜಿನಪ್ಪ, ಬಸಪ್ಪ, ಸಿದ್ದಲಿಂಗಪ್ಪ, ವೊಡಕಪ್ಪ, ಶಿವಣ್ಣ ನಾಯ್ಕ ಇದ್ದರು.