ಪಿಂಜಾರ್ ಹೆಗ್ಡಾಳ್ ಹತ್ತಿರ ಸಾರಿಗೆ ಬಸ್ ಮರಕ್ಕೆ ಡಿಕ್ಕಿಯಾಗಿರುವುದು.
ಹಗರಿಬೊಮ್ಮನಹಳ್ಳಿ: ತಾಲೂಕಿನ ಪಿಂಜಾರ್ ಹೆಗ್ಡಾಳ್ ಬಳಿ ಭಾನುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಚಲಿಸುತ್ತಿದ್ದ ಸಾರಿಗೆ ಬಸ್ಸಿನ ಪ್ಲೇಟ್ (ಬ್ಲೇಡ್) ಕಟ್ ಆಗಿದ್ದು, ಕೂಡಲೇ ಎಚ್ಚೆತ್ತುಕೊಂಡ ಚಾಲಕ ಶಂಕರಲಿಂಗ ಬಸ್ಸನ್ನು ರಸ್ತೆಯ ಪಕ್ಕದ ತಗ್ಗಿಗೆ ಇಳಿಸಿ ಮರಕ್ಕೆ ಡಿಕ್ಕಿ ಹೊಡೆಸುವ ಮೂಲಕ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.
ಚಾಲಕನ ಈ ಸಮಯಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ 15 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಟ್ಟಣದ ಘಟಕಕ್ಕೆ ಸೇರಿದ ಸಾರಿಗೆ ಬಸ್ ರಾಯಚೂರಿನತ್ತ ಹೊರಟಿತ್ತು. ಹೊಸಪೇಟೆ-ಹರಿಹರ ರಸ್ತೆಯ ಪಿಂಜಾರ್ ಹೆಗ್ಡಾಳ್ ಸಮೀಪಿಸುತ್ತಿದ್ದಂತೆ ರಸ್ತೆಯಲ್ಲಿದ್ದ ಗುಂಡಿಯಿಂದಾಗಿ ಬಸ್ಸಿನ ಪ್ಲೇಟ್ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಚಾಲಕ ತೋರಿದ ಜಾಣ್ಮೆಯಿಂದಾಗಿ ಬಸ್ಸಿನಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ರಸ್ತೆಗಳು ಸಂಪೂರ್ಣವಾಗಿ ಹಾಳಾಗಿರುವುದೆ ಇಂತಹ ಘಟನೆಗಳಿಗೆ ಕಾರಣ ಎಂದು ತಾಲೂಕಿನ ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.