ಚಾನಾಳ್ ಗ್ರಾಮದಲ್ಲಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸುತ್ತಿರುವ ರೈತರಾದ ಪ್ರಕಾಶ್ ರೆಡ್ಡಿ, ವಿರೂಪಾಕ್ಷ ರೆಡ್ಡಿ ಮತ್ತು ಮಲ್ಲಿಕಾರ್ಜುನ್ ರೆಡ್ಡಿ.
- ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ
- ಹೊಸ ಅನುದಾನ ಬಳಸಿ ಬೇರೆಡೆ ಸ್ಥಳಾಂತರಿಸಿ
ಚಾನಾಳ್ ಗ್ರಾಮದ ಜಮೀನಿನಲ್ಲಿ ಅಳವಡಿಸಿದ್ದ ಪೈಪ್‌ಲೈನ್ ತೆರವಿಗೆ ಮುಂದಾದ ಅಧಿಕಾರಿಗಳ ಕ್ರಮ ಖಂಡಿಸಿ ಶನಿವಾರ ರೈತರು ಆಕ್ರೋಶ ವ್ಯಕ್ತಪಡಿಸಿದರು. ಜೆಸಿಬಿ ಯಂತ್ರದೊಂದಿಗೆ ಜಮೀನಿಗೆ ಆಗಮಿಸಿದ ಅಧಿಕಾರಿಗಳು ಮತ್ತು ರೈತರ ನಡುವೆ ಮಾತಿನ ಚಕಮಕಿ ಜರುಗಿ, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಮಳೆಯ ಅಭಾವದ ನಡುವೆಯೂ ಕಾಲುವೆ ನೀರಿನ ಸದುಪಯೋಗ ಪಡೆದುಕೊಂಡು ರೈತರು ನಾಟಿಗೆ ಸಿದ್ಧತೆ ಮಾಡಿಕೊಂಡಿದ್ದರು. ಕಳೆದ ಐದು ವರ್ಷಗಳ ಹಿಂದೆ ಬಿ. ಶ್ರೀರಾಮುಲು ಉಸ್ತುವಾರಿ ಸಚಿವರಾಗಿದ್ದ ವೇಳೆ ಎಲ್‌ಎಲ್‌ಸಿ ನಾಲೆಯಿಂದ ರೈತರ ಜಮೀನುಗಳ ಮೂಲಕ ಕೆರೆಗೆ ಪೈಪ್‌ಲೈನ್ ಅಳವಡಿಸಲಾಗಿತ್ತು. ಪ್ರಸ್ತುತ ರಾಜಕೀಯ ಕಾರಣಗಳಿಂದ ಈ ಪೈಪ್‌ಲೈನ್ ತೆರವುಗೊಳಿಸಿ ಬೇರೆಡೆ ಜೋಡಿಸಲು ಮುಂದಾಗಿದ್ದಾರೆ.
ಜೆಸಿಬಿ ಮೂಲಕ ಜಮೀನು ಅಗೆದರೆ ರೈತರಿಗೆ ವ್ಯವಸಾಯ ಮಾಡುವುದು ಅಸಾಧ್ಯವಾಗಲಿದೆ. ಕೂಡಲೇ ಅಧಿಕಾರಿಗಳು ಈ ಕ್ರಮವನ್ನು ಕೈಬಿಟ್ಟು, ನೂತನ ಅನುದಾನದ ಮೂಲಕ ಬೇರೆಡೆ ಪೈಪ್‌ಲೈನ್ ಜೋಡಿಸಬೇಕು ಎಂದು ರೈತರು ತೀವ್ರವಾಗಿ ಒತ್ತಾಯಿಸಿದರು.