ಕಂಪ್ಲಿಯಲ್ಲಿ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಆರ್.ನಟರಾಜ್ ಭಾನುವಾರ ಚಾಲನೆ ನೀಡಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ.ಶಾಂತಿ, ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಬಿ.ಜಿ.ಪ್ರಮೋದ್, ಹೆಚ್ಚುವರಿ ಅಡ್ಡೋಕೇಟ್ ಜನರಲ್ ಎಸ್.ಇಸ್ಮಾಯಿಲ್ ಜಬೀವುಲ್ಲ, ಬೆಂಗಳೂರಿನ ವಕೀಲರ ಪರಿಷತ್ ಸದಸ್ಯ ಜೆ.ಎಂ.ಅನಿಲ್‌ಕುಮಾರ್ ಇತರರಿದ್ದರು. 
ಬಳ್ಳಾರಿ

ಸಮಸ್ಯೆ ಬಗೆಹರಿಯದಿದ್ದರೆ ಮಾತ್ರ ಕೋರ್ಟ್‌ಗೆ ಬನ್ನಿ

ಪ್ರಮುಖ ಮುಖ್ಯಾಂಶಗಳು

  • ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಆರ್. ನಟರಾಜ್ ಸಲಹೆ
  • ಕಂಪ್ಲಿ ನ್ಯಾಯಾಲಯ ಉದ್ಘಾಟನೆ
ಕಂಪ್ಲಿ: ಕೋರ್ಟ್ ಇದೆಯೆಂಬ ಕಾರಣಕ್ಕೆ ಸಣ್ಣಪುಟ್ಟ ವಿಷಯಗಳಿಗೂ ಮೊಕದ್ದಮೆ ಹೂಡಬೇಡಿ. ನಿಮ್ಮ ನಿಮ್ಮಲ್ಲೇ ಸಂಧಾನದ ಮೂಲಕ ಬಗೆಹರಿಸಿಕೊಳ್ಳಿ. ಸಮಸ್ಯೆ ಬಗೆಹರಿಯದಿದ್ದರೆ ಮಾತ್ರ ನ್ಯಾಯಾಲಯಕ್ಕೆ ಬನ್ನಿ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಆರ್. ನಟರಾಜ್ ಸಲಹೆ ನೀಡಿದರು.
ಇಲ್ಲಿನ ಮಾರುತಿನಗರದಲ್ಲಿ ಭಾನುವಾರ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯ ಉದ್ಘಾಟಿಸಿ ಮಾತನಾಡಿದರು. ತಾಲೂಕಿನಲ್ಲಿ 430 ಸಿವಿಲ್ ಹಾಗೂ 552 ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ನ್ಯಾಯಾಲಯ ಸ್ಥಾಪನೆಯಿಂದ ಹಕ್ಕು ಮತ್ತು ಬಾಧ್ಯತೆಗಳ ಅರಿವಾಗುತ್ತದೆ. ಕಂಪ್ಲಿಯಲ್ಲಿ 63 ವಕೀಲರಿದ್ದು, ಪ್ರಸ್ತುತ ಇರುವ ಕಟ್ಟಡ ಚಿಕ್ಕದಾಗಿದೆ. ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ಸೇರಿದಂತೆ ಮೂಲಸೌಕರ್ಯಗಳ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ. ಶಾಂತಿ ಮಾತನಾಡಿ, ಪಟ್ಟಣದ ಸರ್ವೇ ನಂಬರ್ 442ಎ ವ್ಯಾಪ್ತಿಯ 3.15 ಎಕರೆ ಪ್ರದೇಶದಲ್ಲಿ ನಾಲ್ಕು ಕೋರ್ಟ್ ಹಾಲ್, ವಸತಿಗೃಹಗಳು, ವಕೀಲರ ಸಂಘ ಹಾಗೂ ಮಹಿಳೆಯರ ವಿಶ್ರಾಂತಿ ಕೊಠಡಿ ಸೇರಿದಂತೆ ಸುಸಜ್ಜಿತ ಕಟ್ಟಡ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಕಕ್ಷಿದಾರರ ಮನೆಬಾಗಿಲಿಗೆ ನ್ಯಾಯ ಒದಗಿಸಲು ಈ ಕೋರ್ಟ್ ಆರಂಭಿಸಲಾಗಿದೆ. ನ್ಯಾಯಾಲಯ ಸದಾ ಕ್ರಿಯಾಶೀಲವಾಗಿರುವಂತೆ ವಕೀಲರು ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಬಿ.ಜಿ. ಪ್ರಮೋದ್, ನ್ಯಾಯಮೂರ್ತಿ ಅವರ ಪತ್ನಿ ಆರ್. ಅರ್ಚನಾ ನಟರಾಜ್, ಹೆಚ್ಚುವರಿ ಅಡ್ವೊಕೇಟ್ ಜನರಲ್ ಎಸ್. ಇಸ್ಮಾಯಿಲ್ ಜಬೀವುಲ್ಲಾ, ಬೆಂಗಳೂರಿನ ವಕೀಲರ ಪರಿಷತ್ ಸದಸ್ಯ ಜೆ.ಎಂ. ಅನಿಲ್ ಕುಮಾರ್, ಹೊಸಪೇಟೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಗುಜ್ಜಲ ನಾಗರಾಜ, ಪಿಡಬ್ಲುೃಡಿ ಕಾರ್ಯನಿರ್ವಾಹಕ ಎಂಜಿನಿಯರ್ ಬಿ. ವಿಜಯಭಾಸ್ಕರ್, ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು ಹಾಗೂ ವಕೀಲರ ಬಳಗದ ಗೌರವಾಧ್ಯಕ್ಷ ಕೆ. ಪ್ರಭಾಕರರಾವ್ ಉಪಸ್ಥಿತರಿದ್ದರು.
ಕಂಪ್ಲಿಯಲ್ಲಿ ನ್ಯಾಯಾಲಯ ಆರಂಭ ಗೊಂಡಿರುವುದು ಸಂತಸ ತಂದಿದೆ. ವಕೀಲರ ಮನವಿಯಂತೆ ಸರ್ಕಾರದ ಮೇಲೆ ಒತ್ತಡ ಹೇರಿ ಕೋರ್ಟ್ ಮಂಜೂರು ಮಾಡಿಸಲಾಗಿದೆ. ಡಿಸಿ ಜತೆ ಸಮಾಲೋಚಿಸಿ ಪುರಸಭೆ ಉದ್ಯಾನದ ಕಟ್ಟಡವನ್ನು ತಾತ್ಕಾಲಿಕವಾಗಿ ಒದಗಿಸಿಕೊಡಲಾಗಿದೆ. ಇದನ್ನು ನ್ಯಾಯಾಲಯವನ್ನಾಗಿ ಪರಿವರ್ತಿಸಲು 25 ಲಕ್ಷ ರೂ. ಅನುದಾನ ಒದಗಿಸಿದ್ದೇನೆ. ಪ್ರಜಾಸೌಧದ ಬಳಿ 3.12 ಎಕರೆ ಭೂಮಿಯನ್ನು ನ್ಯಾಯಾಲಯದ ಕಟ್ಟಡಕ್ಕೆ ಮೀಸಲಿಟ್ಟಿದ್ದೇನೆ. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಒತ್ತಾಯಿಸಿ 25 ಕೋಟಿ ರೂ. ವೆಚ್ಚದಲ್ಲಿ ನ್ಯಾಯಾಲಯದ ಕಟ್ಟಡ ನಿರ್ಮಿಸಿಕೊಡುತ್ತೇನೆ.
ಜೆ.ಎನ್. ಗಣೇಶ್ ಶಾಸಕ, ಕಂಪ್ಲಿ