ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಮ್ಮನಹಳ್ಳಿಯಲ್ಲಿ ಈರುಳ್ಳಿ ಫಸಲನ್ನು ಜಾನುವಾರುಗಳು ಮೇಯ್ಯುತ್ತಿರುವುದು.  
ಬಳ್ಳಾರಿ

ಜಾನುವಾರುಗಳಿಗೆ ಆಹಾರವಾದ ಈರುಳ್ಳಿ

ಪ್ರಮುಖ ಮುಖ್ಯಾಂಶಗಳು

  • ಈರುಳ್ಳಿ ಬೆಲೆ ಕುಸಿತದಿಂದ ರೈತ ಕಂಗಾಲು
  • ಹಗರಿಬೊಮ್ಮನಹಳ್ಳಿ ಚಿಮ್ಮನಹಳ್ಳಿ ಜಾನುವಾರು ಈರುಳ್ಳಿ ಆಹಾರ
ಹಗರಿಬೊಮ್ಮನಹಳ್ಳಿ: ಈರುಳ್ಳಿ ಬೆಲೆ ಕುಸಿತದಿಂದ ಚಿಮ್ಮನಹಳ್ಳಿಯ ರೈತ ಕಟಾವು ಹಂತದಲ್ಲಿದ್ದ ಫಸಲನ್ನು ಜಾನುವಾರು ಬಿಟ್ಟು ಮೇಯಿಸಿದ್ದಾರೆ.
ಈರುಳ್ಳಿ ಬೆಳೆಗೆ ಖರ್ಚು ಮಾಡಿದಷ್ಟು ಹಣವೂ ಕೈಗೆ ಸಿಗುವ ನಿರೀಕ್ಷೆ ಹುಸಿಯಾಗಿದ್ದು, ಚಿಮ್ಮನಹಳ್ಳಿಯ ರೈತ ವರಕೆರೆ ಹಾಲಪ್ಪ, ಒಂದು ಎಕರೆ ಭೂಮಿಯಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಯನ್ನು ನಾಶಪಡಿಸಿದ್ದಾರೆ. 80 ಸಾವಿರ ರೂ. ಖರ್ಚು ಮಾಡಿ ಈರುಳ್ಳಿಯನ್ನು ಸಮೃದ್ಧವಾಗಿ ಬೆಳೆದಿದ್ದರು. ಈಗ ಕ್ವಿಂಟಾಲ್ ಈರುಳ್ಳಿಗೆ ಮಾರುಕಟ್ಟೆಯಲ್ಲಿ 200ರಿಂದ 300 ರೂ. ಬೆಲೆಯಿದ್ದು, ಕಟಾವು ಮಾಡಿದ ಈರುಳ್ಳಿಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಸಾಲದ ಹೊರೆ ಬೀಳಲಿದೆ ಎಂಬ ಆತಂಕದಿಂದ ಬೆಳೆ ನಾಶಪಡಿಸಿದ್ದಾರೆ.
ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ 80 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಆದರೆ, ಬೆಲೆ ಕುಸಿತದಿಂದ ಕಟಾವಿಗೆ ಬಂದ ಫಸಲನ್ನು ರೈತರು ನಾಶಪಡಿಸುತ್ತಿದ್ದಾರೆ, ಸದ್ಯ 40 ಹೆಕ್ಟೇರ್ ಫಸಲು ಮಾತ್ರ ಉಳಿದಿದೆ.
"

ಸರ್ಕಾರ ನೀಡುವ ಧನಸಹಾಯದಿಂದ ಈರುಳ್ಳಿ ಬೆಳೆಗಾರರು ಈರುಳ್ಳಿ ಸಂರಕ್ಷಣಾ ಘಟಕ ನಿರ್ಮಿಸಿಕೊಳ್ಳಬೇಕು. ಇದರಿಂದ ಆರು ತಿಂಗಳವರೆಗೂ ಈರುಳ್ಳಿ ನಾಶವಾಗದಂತೆ ಕಾಪಾಡಿಕೊಳ್ಳಬಹುದು. ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯ ಪರಿಣಾಮವನ್ನು ಎದುರಿಸಬಹುದು.

— > ನಿಚ್ಚಾಪುರ ವಿಜಯ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ, ಹಗರಿಬೊಮ್ಮನಹಳ್ಳಿ

ಈ ವರ್ಷ ಈರುಳ್ಳಿ ಉತ್ತಮ ಇಳುವರಿ ಇದ್ದರೂ ಬೆಲೆ ಇಳಿಕೆಯಿಂದ ರೈತರೇ ಪಾತಾಳಕ್ಕೆ ಕುಸಿದಿದ್ದಾರೆ. ಈರುಳ್ಳಿ ರಫ್ತಾದರೆ ಬೆಳೆಗಾರರಿಗೆ ಲಾಭವಾಗಲಿದೆ. ಬಿತ್ತನೆ ವೇಳೆ ಅಧಿಕಾರಿಗಳು ರೈತರಿಗೆ ಅಗತ್ಯ ಮಾಹಿತಿ ನೀಡಬೇಕು.