ಬಳ್ಳಾರಿಯ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನುದ್ದೇಶಿಸಿ ಡಿಸಿ ಕೆ.ನಾಗೇಂದ್ರ ಪ್ರಸಾದ್ ಮಾತನಾಡಿದರು. 
ಬಳ್ಳಾರಿ

ಅಧಿಕಾರಿಗಳು ಗುಣಮಟ್ಟದ ಸೇವೆ ಸಲ್ಲಿಸಿ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸ್ಥಾನದಲ್ಲಿಯೇ ಉಳಿಯಬೇಕು

ಬಳ್ಳಾರಿ :

ಸಾರ್ವಜನಿಕರ ಕುಂದುಕೊರತೆಗಳಿಗೆ ನೈಜ ಹಾಗೂ ಗುಣಮಟ್ಟದ ಪರಿಹಾರ ನೀಡಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಡಿಸಿ ಕೆ.ನಾಗೇಂದ್ರ ಪ್ರಸಾದ್ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಸಿಎಂ ಸರ್ಕಾರಿ ನೌಕರರ ಸಂವಾದ ಕಾರ್ಯಕ್ರಮದ ಬಳಿಕ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದರು. ಆದ್ದರಿಂದ, ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಜಾಸೇವೆ ಆಂದೋಲನ ಕಡ್ಡಾಯವಾಗಿ ಆಯೋಜಿಸಲು ತೀರ್ಮಾನಿಸಲಾಗಿದ್ದು, ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿಯೇ ಉಳಿಯಬೇಕು ಎಂದು ಸೂಚಿಸಿದರು.

ರಾಜ್ಯ ಸರ್ಕಾರದ ವಿನೂತನ ಯೋಜನೆಗಳಾದ ಪ್ರಜಾಸೇವೆ, ಭಾರತ್ ಜೋಡೋ ಸಂಘಗಳ ರಚನೆ ಹಾಗೂ ಮಾದಕ ದ್ರವ್ಯ ವಿರೋಧಿ ಜಾಗೃತಿ ಮತ್ತು ಕಾರ್ಯಾಚರಣೆ ಅಭಿಯಾನಗಳಾದ ಬೇಡ ಬ್ರೋ ಮತ್ತು ಆಪರೇಷನ್ ರೈಸ್ ಕಾರ್ಯಕ್ರಮಗಳನ್ನು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.
ಕಂದಾಯ ಮತ್ತು ನಗರಾಭಿವೃದ್ಧಿ ಇಲಾಖೆಗಳು ಜಂಟಿಯಾಗಿ ಎಸ್‌ಐಆರ್ ಪ್ರಕ್ರಿಯೆ ಕೈಗೆತ್ತಿಕೊಂಡಿದ್ದು, ಈಗಾಗಲೇ ಅಸಂಗತತೆಗಳು ಗಣನೀಯವಾಗಿ ಕಡಿಮೆಗೊಳಿಸಲಾಗಿದೆ. ಸಾರ್ವಜನಿಕರಿಂದ ಸ್ವೀಕರಿಸಲಾದ ಫಾರ್ಮಾಗಳಲ್ಲಿನ ದೋಷಗಳನ್ನು ಸರಿಪಡಿಸಲು ಜಂಟಿ ಕ್ರಿಯಾ ಯೋಜನೆ ರೂಪಿಸಿ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತಿದೆ. ಈ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದರು.
ಅಧಿಕಾರಿಗಳು ಕೇವಲ ತಮ್ಮ ಇಲಾಖೆಗೆ ಮಾತ್ರ ಸೀಮಿತವಾಗದೆ, ಉತ್ತಮ ಭಾವನೆಯಿಂದ ಕೆಲಸ ಮಾಡಬೇಕಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ನೀಡಲಾಗುವ ಯಾವುದೇ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಳ್ಳಲು ಮನೋಭಾವನೆ ಹೊಂದಿರಬೇಕು. ಇಲಾಖೆಗಳ ನಡುವಿನ ಸಮನ್ವಯತೆಯಿಂದ ಜಿಲ್ಲಾದ್ಯಂತ ಉತ್ತಮ ಆಡಳಿತ ನೀಡಲು ಅಧಿಕಾರಿಗಳು ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಕರೆ ನೀಡಿದರು.
===