ಬಳ್ಳಾರಿಯ ಡಿಎಆರ್ ಪೊಲೀಸ್ ವಸತಿ ಗೃಹಗಳ ಸಂಕೀರ್ಣಕ್ಕೆ ಡಿಜಿಪಿ ಡಾ.ಎಂ.ಎ.ಸಲೀಂ ಭೇಟಿ ನೀಡಿ ಪೊಲೀಸ್ ಸಿಬ್ಬಂದಿಯೊಂದಿಗೆ ಕುಂದುಕೊರತೆ ಆಲಿಸಿದರು. ಐಜಿಪಿ ಡಾ.ಹರ್ಷ, ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್, ಎಎಸ್ಪಿ ಎಸ್.ನವೀನ್ ಕುಮಾರ್ ಇತರರಿದ್ದರು.
ಬಳ್ಳಾರಿ : ಪೊಲೀಸ್ ಇಲಾಖೆಗೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಕಿರಿಯ ಅಧಿಕಾರಿಗಳಿಗೆ ಹಿರಿಯರು ತಮ್ಮ ಅನುಭವ ಹಂಚಿಕೊಳ್ಳುವ ಮೂಲಕ ಅವರ ವೃತ್ತಿ ಕೌಶಲ ಹೆಚ್ಚಿಸಬೇಕು ಎಂದು ಡಿಜಿಪಿ ಡಾ.ಎಂ.ಎ.ಸಲೀಂ ಹೇಳಿದರು.
ನಗರದ ಎಸ್ಪಿ ಕಚೇರಿ ಸಭಾಂಗಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸೋಮವಾರ ಆಯೋಜಿಸಿದ್ದ ವಿಮರ್ಶನಾ ಸಭೆಯಲ್ಲಿ ಮಾತನಾಡಿದರು. ಆಧುನಿಕ ಕಾಲಘಟ್ಟದಲ್ಲಿ ಅಪರಾಧ ತಡೆಗೆ ತಂತ್ರಜ್ಞಾನದ ಪಾತ್ರ ದೊಡ್ಡದಿದೆ. ಪೊಲೀಸ್ ವ್ಯವಸ್ಥೆಯಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ತಂತ್ರಜ್ಞಾನದ ಕುರಿತು ಸಿಬ್ಬಂದಿ ಸೂಕ್ತ ತರಬೇತಿ ಪಡೆಯಬೇಕು. ಪ್ರಕರಣಗಳ ತನಿಖೆಯಲ್ಲಿ ಈ ತಂತ್ರಜ್ಞಾನ ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ನಿರ್ದೇಶಿಸಿದರು.
ಸಾರ್ವಜನಿಕರೊಂದಿಗೆ ಸ್ನೇಹಪರವಾಗಿದ್ದುಕೊಂಡು, ಭ್ರಷ್ಟಾಚಾರ ಮುಕ್ತ ಮತ್ತು ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಬಳಿಕ ಡಿಎಆರ್ ಪೊಲೀಸ್ ವಸತಿ ಗೃಹಗಳ ಸಂಕೀರ್ಣಕ್ಕೆ ಭೇಟಿ ನೀಡಿ, ಅಲ್ಲಿ ವಾಸಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಕುಟುಂಬದವರ ಕುಂದುಕೊರತೆ ಆಲಿಸಿದರು. ನಂತರ ನಗರದ ಬ್ರೂಸ್‌ಪೇಟೆ ಪೊಲೀಸ್ ಠಾಣೆಗೂ ಭೇಟಿ ನೀಡಿ ಪರಿಶೀಲಿಸಿದರು.