ಬಳ್ಳಾರಿಯ ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜನಗಣತಿ ತರಬೇತಿ ಕಾರ್ಯಾಗಾರದಲ್ಲಿ ಡಿಸಿ ನಾಗೇಂದ್ರ ಪ್ರಸಾದ್ ಕೆ., ಮಾತನಾಡಿದರು. ಎಡಿಸಿ ಮಹಮ್ಮದ್ ಎನ್.ಜುಬೇರ್, ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್, ಎಸಿ ರಾಜೇಶ್ ಎಚ್.ಡಿ., ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ, ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ ಇದ್ದರು.
ಬಳ್ಳಾರಿ : ಜನಗಣತಿ ಬಗ್ಗೆ ಅಧಿಕಾರಿ-ಸಿಬ್ಬಂದಿ ಸೂಕ್ತ ತರಬೇತಿ ಪಡೆದುಕೊಂಡು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಡಿಸಿ ನಾಗೇಂದ್ರ ಪ್ರಸಾದ್. ಕೆ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಜನಗಣತಿ ಕಾರ್ಯ ಕುರಿತು ಜಿಲ್ಲಾಮಟ್ಟ, ಉಸ್ತುವಾರಿ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಏ. 01 ರಿಂದ 15 ರ ವರೆಗೆ ಸಾರ್ವಜನಿಕರಿಗೆ ಸ್ವಯಂ ಗಣತಿಗೆ ಅವಕಾಶ ಮತ್ತು ಏಪ್ರಿಲ್ 16 ರಿಂದ ಮೇ 16 ರವರೆಗೆ ಮನೆ ಪಟ್ಟಿ ಮಾಡುವ ಕ್ಷೇತ್ರ ಕಾರ್ಯ ನಡೆಯಲಿದೆ. ಈ ಹಿಂದಿನ ಸಾಮಾಜಿಕ-ಆರ್ಥಿಕ ಸಮೀಕ್ಷೆಗಿಂತ ಈ ಬಾರಿಯ ಜನಗಣತಿ ಪ್ರಕ್ರಿಯೆ ಸರಳವಾಗಿರಲಿದ್ದು, ಕನಿಷ್ಠ ಮತ್ತು ಅಗತ್ಯ ಮಾಹಿತಿ ಮಾತ್ರ ಸಂಗ್ರಹಿಸಲಾಗುತ್ತದೆ. ಗಣತಿ ಅವಧಿಯಲ್ಲಿಯೇ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕೂಡಾ ನಡೆಯಲಿದೆ. ಗಣತಿ ಪ್ರಕ್ರಿಯೆಯು ಆರಂಭದಿಂದ ಮುಕ್ತಾಯದವರೆಗೆ ನಿರ್ವಹಿಸಲು ಜನಗಣತಿ ನಿರ್ವಹಣೆ ಮತ್ತು ಮಾನಿಟರಿಂಗ್ ಸಿಸ್ಟಂ ವಿಶೇಷ ವೆಬ್ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ ಎಂದರು
ಜಿಪಂ ಸಿಇಒ ಮಹಮ್ಮದ ಹ್ಯಾರಿಸ್ ಸುಮೈರ್ ಮಾತನಾಡಿ, ಜನಗಣತಿ ಪ್ರಕ್ರಿಯೆಯಲ್ಲಿ ಈ ಬಾರಿ ಎಚ್‌ಎಲ್‌ಒ ಆ್ಯಪ್ ಇಂಗ್ಲೀಷ್ ಜತೆಗೆ ಕನ್ನಡದಲ್ಲೂ ಲಭ್ಯವಿದ್ದು, ಇದು ಸ್ಥಳೀಯ ಸಿಬ್ಬಂದಿಗೆ ಸಹಕಾರಿಯಾಗಲಿದೆ. ಈ ಬಾರಿಯ ಪ್ರಶ್ನಾವಳಿಯಲ್ಲಿ ಇಂಟರನೆಟ್ ಬಳಕೆ ಸೇರಿದಂತೆ ಕೆಲವು ಹೊಸ ಮತ್ತು ಗೌಪ್ಯ ಮಾಹಿತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಸೇರಿಸಲಾಗಿದೆ. ಇಂಟರ್‌ನೆಟ್ ಸಮಸ್ಯೆಯಿರುವ ಗುಡ್ಡಗಾಡು ಪ್ರದೇಶಗಳಲ್ಲಿ ಅನುಕೂಲವಾಗುವಂತೆ ಆಫ್‌ಲೈನ್‌ನಲ್ಲಿ ಡೇಟಾ ಉಳಿಸಿ ನಂತರ ಸಿಂಕ್ ಮಾಡುವ ಆಯ್ಕೆಯನ್ನು ನೀಡಲಾಗಿದೆ ಎಂದು ತಿಳಿಸಿದರು.
ಎಡಿಸಿ ಮಹಮ್ಮದ್ ಎನ್.ಜುಬೇರ್ ಮಾತನಾಡಿ, ಗಣತಿ ಉದ್ದೇಶಕ್ಕಾಗಿ ಬ್ಲಾಕ್ ರಚಿಸಲಾಗುತ್ತಿದ್ದು, 700ರಿಂದ 800 ಜನಸಂಖ್ಯೆಗೆ ಒಬ್ಬ ಗಣತಿದಾರರನ್ನು ಮತ್ತು ಪ್ರತಿ ಆರು ಜನ ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದರು.
ಬಳಿಕ ಕಾರ್ಯಾಗಾರದಲ್ಲಿ ಜನಗಣತಿ ಕಾರ್ಯಾಚರಣೆಯ ನಿರ್ದೇಶನಾಲಯದ ಡಿಡಿಸಿಒ ಕೆ.ಜ್ಞಾನ ಪ್ರಕಾಶಂ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಜನಗಣತಿ ಪ್ರಕ್ರಿಯೆ ಕುರಿತು ಸವಿವರವಾಗಿ ಮಾಹಿತಿ ನೀಡಿದರು.