ನರ್ಸರಿ 
ಬಳ್ಳಾರಿ

ಕಂಪ್ಲಿಯಲ್ಲಿ ಆರಂಭಿಸಬೇಕಿದೆ ನರ್ಸರಿ

ಅಶೋಕ್ ಕುಮಾರ್ ಎನ್
ಕಂಪ್ಲಿ: ಪಟ್ಟಣ ತಾಲೂಕು ಕೇಂದ್ರವಾಗಿ ಒಂಬತ್ತು ವರ್ಷಗಳಾದರೂ ತೋಟಗಾರಿಕೆ ನರ್ಸರಿ ಇನ್ನೂ ಆರಂಭಗೊಂಡಿಲ್ಲ. ವಿಜಯನಗರ ಜಿಲ್ಲೆಯ ಬುಕ್ಕಸಾಗರದ ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಯನ್ನೇ ತಾಲೂಕಿನ ತೋಟಗಾರಿಕೆ ಕೃಷಿಕರು ಅವಲಂಬಿಸಿದ್ದಾರೆ.
ತಾಲೂಕಿನಲ್ಲಿ ಕಸಿ ಸಸಿಗಳನ್ನು ಒದಗಿಸಲು ಕನಿಷ್ಠ ಐದು ಎಕರೆ ಸರ್ಕಾರಿ ಜಮೀನು ಗುರುತಿಸಿ ತೋಟಗಾರಿಕೆ ನಸರ್ರಿ ಆರಂಭಿಸಬೇಕಿದೆ. ತಾಲೂಕಿನಲ್ಲಿ ನಾಲ್ಕು ಸಾವಿರ ಹೆಕ್ಟೇರ್ ತೋಟಗಾರಿಕೆ ಪ್ರದೇಶವಿದ್ದು, ಅದನ್ನು ವಿಸ್ತರಿಸಲು ತೋಟಗಾರಿಕೆ ಇಲಾಖೆಯ ನರ್ಸರಿ ಆರಂಭಿಸಬೇಕಿದೆ. ಇದರಿಂದ ಗುಣಮಟ್ಟದ ಕಸಿ ಸಸಿ, ಹೈಬ್ರಿಡ್ ಬೀಜಗಳನ್ನು ಅಭಿವೃದ್ಧಿಪಡಿಸಿ ಹಣ್ಣು, ತರಕಾರಿ, ಹೂ, ಔಷಧೀಯ ಸಸ್ಯಗಳು, ಅಲಂಕಾರಿಕ ಸಸಿಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಗೊಳಿಸಿ ಕಡಿಮೆ ವೆಚ್ಚದಲ್ಲಿ ತೋಟಗಾರಿಕೆ ರೈತರಿಗೆ ಒದಗಿಸಲು ಸಾಧ್ಯವಾಗುತ್ತದೆ.
ರೋಗಮುಕ್ತ ಅಧಿಕ ಇಳುವರಿ ನೀಡುವ ಕಸಿ ಮಾಡಿದ ಸಸಿಗಳು ರೈತರಿಗೆ ದೊರಕುವುದರಿಂದ ತೋಟಗಾರಿಕೆ ಲಾಭದಾಯಕವಾಗಲಿದೆ. ನರ್ಸರಿಯಲ್ಲಿ ಹಸಿರುಮನೆ, ನೆರಳು ಪರದೆ ಬಳಸಿ ವರ್ಷವಿಡಿ ಸಸಿಗಳನ್ನು ಬೆಳೆಯಬಹುದಾಗಿದೆ. ಬೀಜದಿಂದ ಸಸಿ ಉತ್ಪಾದಿಸುವ ಸಮಯ, ಶ್ರಮ, ಸಂಚಾರ ವೆಚ್ಚ ತೋಟಗಾರಿಕೆ ಕೃಷಿಕರಿಗೆ ಉಳಿತಾಯವಾಗುತ್ತದೆ. ಮೇಲಾಗಿ ತಾರಸಿ (ಛಾವಣಿ) ತೋಟಗಾರಿಕೆ, ವಾಣಿಜ್ಯ ತೋಟ, ಹಿತ್ತಲ ತೋಟ, ಕೈ ತೋಟ, ಮನೆತೋಟಗಳನ್ನು ಕಡಿಮೆ ವೆಚ್ಚದಲ್ಲಿ ಆರಂಭಿಸಲು ನರ್ಸರಿಯಿಂದ ಸಸಿಗಳು ದೊರೆಯುತ್ತವೆ.
ಅಧಿಕ ಇಳುವರಿ ನೀಡುವ ಸುಧಾರಿತ ತಳಿಯ ಗುಣಮಟ್ಟದ ಟೊಮ್ಯಾಟೋ, ಮೆಣಸಿನಕಾಯಿ, ಬದನೆಕಾಯಿ, ಆಲೂಗಡ್ಡೆ ಮೊದಲಾದ ತರಕಾರಿ ಸಸಿಗಳು, ಮಾವು, ಬಾಳೆ, ಪೇರಲ, ಸಪೋಟ, ನುಗ್ಗೆ, ನಿಂಬೆ, ದಾಳಿಂಬೆ, ಅಂಜೂರ, ಸೀತಾಫಲ ನಾನಾ ಫಲೋದ್ಯಾನ ಹಣ್ಣಿನ ಸಸಿಗಳು, ಗುಲಾಬಿ, ಮಲ್ಲಿಗೆ ಸೇರಿ ಫ್ಲೋರಿಕಲ್ಚರ್ ಅಲಂಕಾರಿಕ ಸಸಿಗಳು, ತುಳಸಿ, ಅಲೋವೇರಾ, ಅಶ್ವಗಂಧ ಮೊದಲಾದ ಔಷಧೀಯ ಸಸಿಗಳನ್ನು ತೋಟಗಾರಿಕೆ ರೈತರಿಗೆ ಒದಗಿಸಲು ಸಾಧ್ಯವಾಗುತ್ತದೆ.
ಇದರಿಂದ ತೋಟಗಾರಿಕೆ ಕ್ಷೇತ್ರ ವಿಸ್ತರಣೆಗೆ ಅನುಕೂಲವಾಗುತ್ತದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿಯಲ್ಲಿ ತೋಟಗಾರಿಕೆ ಸಸಿಗಳನ್ನು ಕೊಳ್ಳಲು ಸಹಾಯಧನ, ಪ್ರೋತ್ಸಾಹ ಧನ, ಬ್ಯಾಂಕ್ ಸಾಲ ಮತ್ತಿತರ ಸೌಲಭ್ಯ ಪಡೆದುಕೊಳ್ಳಲು ತೋಟಗಾರಿಗೆ ರೈತರಿಗೆ ಸಾಧ್ಯವಾಗುತ್ತದೆ.