ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹೊರನೋಟ
ಬಳ್ಳಾರಿ : ಗಣಿನಾಡು ಖ್ಯಾತಿಯ ಬಳ್ಳಾರಿ ಜಿಲ್ಲೆಗೆ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಘೋಷಣೆಯಾಗಿ ಹದಿನೇಳು ತಿಂಗಳು ಕಳೆದರೂ ಈವರೆಗೆ ಯಾವುದೇ ಚಟುವಟಿಕೆಗಳು ಕಂಡಿಲ್ಲ. ಆದ್ದರಿಂದ, 2026ರಲ್ಲಿ ಸಮ್ಮೇಳನ ನಡೆಯುವುದೇ ಎಂಬ ಅನುಮಾನ ಜನರಲ್ಲಿ ಮೂಡಿದೆ.
2024ರ ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ತೆರೆಕಂಡ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಂದಿನ ವರ್ಷದ ನಡೆಯುವ ಜಿಲ್ಲೆ ಸಮ್ಮೇಳನ ಹೆಸರು ಘೋಷಣೆಯಾಗಿತ್ತು. ಇದರಿಂದ ಬರೋಬ್ಬರಿ ಆರು ದಶಕಗಳ ಬಳಿಕ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲೆಗೆ ಅತಿಥ್ಯ ವಹಿಸಿಕೊಂಡಿದ್ದರಿಂದ ಜಿಲ್ಲೆಯ ಕನ್ನಡ ಪ್ರೇಮಿಗಳಿಗೆ ಸಂತಸ ಮನೆ ಮಾಡಿತ್ತು. ಆದರೆ, ಸಮ್ಮೇಳನಕ್ಕೆ ಸಾಲು, ಸಾಲು ವಿಘ್ನಗಳು ಎದುರಾಗಿದ್ದು, ಸ್ಥಳೀಯರಲ್ಲಿ ಇದ್ದ ಸಂತಸ ಈಗ ಅತಂಕಕ್ಕೆ ತಿರುಗಿದೆ. ಕಸಾಪ ರಾಜ್ಯಾಧ್ಯಕ್ಷರ ವಿರುದ್ಧ ಹಣ ದುರ್ಬಳಕೆ, ಅಧಿಕಾರ ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಕ ಮಾಡಿತು. ಇದನ್ನು ಪ್ರಶ್ನಿಸಿ ಅಧ್ಯಕ್ಷ ಮಹೇಶಿ ಜೋಶಿ ಅವರು ಕಾನೂನು ಹೋರಾಟ ನಡೆಸುತ್ತಿದ್ದಾರೆ. ಇತ್ತ ಸರ್ಕಾರದಿಂದ ಕಸಾಪಕ್ಕೆ ಆಡಳಿತಾಧಿಕಾರಿ ನೇಮಕಗೊಂಡು ಹಲವು ತಿಂಗಳು ಕಳೆದರೂ ಸಮ್ಮೇಳನಕ್ಕೆ ಪೂರಕವಾದ ಯಾವುದೇ ಚಟುವಟಿಕೆಗಳು ನಡೆದಿಲ್ಲ. ಅಲ್ಲದೆ, ನೇಮಕಗೊಂಡಿರುವ ಆಡಳಿತಾಧಿಕಾರಿಯೇ ಸಮ್ಮೇಳನದಲ್ಲಿ ತಮ್ಮ ಕರ್ತವ್ಯಗಳೇನು ಎಂದು ಸ್ಪಷ್ಟನೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದು, ಚರ್ಚೆಗೆ ಗ್ರಾಸವಾಗಿತ್ತು.
ಉಪ ಚುನಾವಣೆ ಮುಗಿತು : ಸಾಹಿತ್ಯ ಸಮ್ಮೇಳನ ದಿನಾಂಕ ನಿಗದಿಗೊಳಿಸಿ ಸ್ವಾಗತ ಸಮಿತಿ ರಚಿಸಿದ ಬಳಿಕ ಕನಿಷ್ಠ ನಾಲ್ಕು ತಿಂಗಳಾದರೂ ಸಿದ್ಧತೆಗೆ ಬೇಕು. ಆದರೆ, ಸಮ್ಮೇಳನ ಸಂಬಂಧ ಈವರೆಗೆ ಒಂದೇ ಒಂದು ಚಟುವಟಿಕೆ ನಡೆದಿಲ್ಲ. ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಸ್ಥಳ ಪರಿಶೀಲನೆ ಮಾಡಿದ್ದು ಬಿಟ್ಟರೆ ಸಮ್ಮೇಳನ ಸಿದ್ಧತೆ ಕಾರ್ಯವೂ ಶುರುಗೊಂಡಿಲ್ಲ. ಕಳೆದ ಕೆಲ ತಿಂಗಳಿಂದ ಪಂಚರಾಜ್ಯ ಚುನಾವಣೆ ಹಾಗೂ ದಾವಣಗೆರೆ, ಬಾಗಲಕೋಟೆ ಉಪ ಚುನಾವಣೆಯಲ್ಲಿ ಗೆಲುವಿಗಾಗಿ ಸರ್ಕಾರದ ಸಚಿವರು, ಶಾಸಕರು ಸೇರಿದಂತೆ ಇಡೀ ಸರ್ಕಾರವೇ ಪ್ರಚಾರದಲ್ಲಿ ಮುಳುಗಿದ್ದರು. ಆದ್ದರಿಂದ, ಸಮ್ಮೇಳನ ಕುರಿತು ಯೋಚಿಸುವ ಸಮಯ ಯಾರಿಗೂ ಇರಲಿಲ್ಲ. ಸದ್ಯ, ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಇನ್ನಾದರೂ ಸಮ್ಮೇಳನ ಆಯೋಜಿಸುವ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳು ಮುಂದಾಗಲಿ ಎಂಬುದು ಜಿಲ್ಲೆಯ ಜನರ ನಾಡಿಮಿಡಿತವಾಗಿದೆ.
ಮೇ ತಿಂಗಳಲ್ಲಿ ಸಮ್ಮೇಳನ ? : ಜಿಲ್ಲೆಗೆ ಸಮ್ಮೇಳನ ಘೋಷಣೆಯಾದ ಕೆಲ ತಿಂಗಳ ನಂತರ ಜಿಲ್ಲಾ ಸಚಿವರು, ಆಡಳಿತಾಧಿಕಾರಿ ಹಾಗೂ ಜಿಲ್ಲಾಡಳಿತದೊಂದಿಗೆ ಸಮ್ಮೇಳನ ಕುರಿತು ನಡೆದ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2026ರ ಮೇ ತಿಂಗಳ ಕೊನೆಯ ವಾರದಲ್ಲಿ ಸಮ್ಮೇಳನ ಆಯೋಜಿಸುವ ಬಗ್ಗೆ ಸಭೆಯಲ್ಲಿ ತಿರ್ಮಾನಿಸಲಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ಅಗತ್ಯ ಸಿದ್ಧತೆ ಕೈಗೊಳ್ಳಿ ಎಂಬುದಾಗಿ ನಿರ್ದೇಶನ ನೀಡಲಾಗಿತ್ತು. ಆದರೆ, ಮೇ ತಿಂಗಳ ಆರಂಭಗೊಂಡಿದ್ದು, ಯಾವ ಚಟುವಟಿಕೆಯೂ ಕಾಣಿಸಿಲ್ಲ. ಜಿಲ್ಲಾ ಕಸಾಪ ಘಟಕದಿಂದ ಮಾತ್ರ ಜಿಲ್ಲಾಧಿಕಾರಿಗಳಿಗೆ ಸಮ್ಮೇಳನದ ದಿನಾಂಕ ಪ್ರಕಟಿಸುವಂತ ಮನವಿ ಸಲ್ಲಿಸಿದ್ದೂ ಬಿಟ್ಟರೆ ಅಷ್ಟೇನು ಚುರುಕುಗೊಂಡಿಲ್ಲ. ಇನ್ನೂ ಮುಂಬರುವ ದಿನಗಳಿಂದ ಮಳೆಗಾಲ, ಶಾಲಾ ಕಾಲೇಜು ಆರಂಭಗೊಳ್ಳುವುದರಿಂದ ಸರ್ಕಾರಿ ಸಿಬ್ಬಂದಿ ಹಾಗೂ ನಿರೀಕ್ಷಿತ ಮಟ್ಟದಲ್ಲಿ ಸಮ್ಮೇಳನಕ್ಕೆ ಜನ ಸೇರುವುದು ಅನುಮಾನವಿದೆ. ಆದ್ದರಿಂದ, ವರ್ಷದ ಕೊನೆಯ ತಿಂಗಳು ಹಾಗೂ ಮುಂಬರುವ ವರ್ಷದಲ್ಲಿ ಸಮ್ಮೇಳನ ನಡೆದರೂ ಆಶ್ಚರ್ಯವಿಲ್ಲ. ಇತ್ತ ಜಿಲ್ಲೆಯ ಜನಪ್ರತಿನಿಧಿಗಳು ನಿರಾಸಕ್ತಿಯಿಂದ ಬೇರೆ ಜಿಲ್ಲೆಗೆ ಅತಿಥ್ಯ ಘೋಷಣೆಯಾಗುವ ಸಾಧ್ಯತೆ ದಟ್ಟವಿದೆ ಎಂಬುದು ಕನ್ನಡ ಪ್ರೇಮಿಗಳ ಅಭಿಪ್ರಾಯವಾಗಿದೆ.
ಕೋಟ್.... ಕೆಲ ತಿಂಗಳಗಳ ಹಿಂದೆ ನಡೆದ ಸಭೆಯಲ್ಲಿ 2026ರ ಮೇ ತಿಂಗಳ ಕೊನೆಯ ವಾರದಲ್ಲಿ ನಡೆಸಲು ಚರ್ಚಿಸಲಾಗಿತ್ತು. ಕೆಲ ಕಾರಣಗಳಿಂದ ವಿಳಂಬವಾಯಿತು. ಆ ಸಭೆ ಬಳಿಕ ಸಮ್ಮೇಳನದ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಂದ ಯಾವುದೇ ಮಾಹಿತಿ ನೀಡಿಲ್ಲ.
- ನಾಗೇಂದ್ರ ಪ್ರಸಾದ್, ಕೆ. ಡಿಸಿ, ಬಳ್ಳಾರಿ.