- ಮೂರು ವರ್ಷದಲ್ಲಿ 229 ಮಾದರಿ ಸಂಗ್ರಹ
- ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಹೊಣೆ
ರಾಜ್ಯದಲ್ಲಿ ಕಳಪೆ ಆಹಾರ ಪೂರೈಕೆ ಮಾಡುತ್ತಿರುವ ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ಮಾಡಿ ಗುಣಮಟ್ಟ ಪರಿಶೀಲಿಸುತ್ತಿದ್ದರೆ. ಆದರೆ, ಜಿಲ್ಲೆಯ ಆಹಾರ ಸುರಕ್ಷತಾ ಇಲಾಖೆಯಲ್ಲಿ ಒಬ್ಬ ಕಾಯಂ ಸಿಬ್ಬಂದಿಯೇ ಇಲ್ಲ.
ನಗರ ಹಾಗೂ ಗ್ರಾಮೀಣ ಸೇರಿದಂತೆ ಹೋಟೆಲ್ ಉದ್ಯಮ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿಯಾಗಿದೆ. ರಸ್ತೆ ಬದಿಯ ಬಂಡಿಗಳಿಂದ ಹಿಡಿದು ದೊಡ್ಡ ಹೋಟೆಲ್‌ಗಳಲ್ಲಿ ತರಹೇವಾರಿ ಖಾದ್ಯಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿವೆ. ದಿನೇದಿನೆ ಬದಲಾಗುತ್ತಿರುವ ಜೀವನಶೈಲಿಂದಾಗಿ ಜನರು ಸಹ ಬೀದಿ ಬದಿ(ಸ್ಟ್ರೀಟ್ ಫುಡ್)ನತ್ತ ಆಕರ್ಷಣೆಗೆ ಒಳಗಾಗುತ್ತಿದ್ದಾರೆ.
ವಿಶೇಷವಾಗಿ ಸಂಜೆ ಮತ್ತು ರಾತ್ರಿ ಹೊತ್ತಲ್ಲಿ ದೊರೆಯುವ ಇಡ್ಲಿ, ದೋಸೆ, ತಟ್ಟೆ ಇಡ್ಲಿ, ಫಲಾವ್, ಚಿತ್ರಾನ್ನ, ಮಾಂಸಾಹಾರಗಳಾದ ಸುಟ್ಟು ಕೊಡುವ ಗ್ರಿಲ್ ಚಿಕನ್, ಗ್ರಿಲ್ ಮಟನ್, ಚಿಕನ್ ಪಕೋಡಾ, ಬಿರ‌್ಯಾನಿ ಸೇರಿ ಇನ್ನಿತರೆ ಆಹಾರಗಳಿಗೆ ಹೆಚ್ಚು ಬೇಡಿಕೆಯಿದ್ದು, ಜನರು ಮುಗಿಬಿದ್ದು ಸೇವಿಸುತ್ತಿದ್ದಾರೆ. ಜತೆಗೆ ವಿವಿಧ ಖಾಸಗಿ ಡೈರಿಗಳ ಹಾಲಿಗೂ ಬೇಡಿಕೆ ಹೆಚ್ಚುತ್ತಿದೆ. ಆದರೆ, ಇವುಗಳನ್ನು ಸೇವಿಸುತ್ತಿರುವ ಜನರಿಗೆ, ಈ ಆಹಾರ ತಮಗೆ ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ಅರಿವಿಲ್ಲ. ಅರಿವು ಮೂಡಿಸಲು ಆಹಾರ ಸುರಕ್ಷತಾ ಇಲಾಖೆಯಲ್ಲಿ ಕಾಯಂ ಅಧಿಕಾರಿ, ಸಿಬ್ಬಂದಿಯೇ ಇಲ್ಲ.
ಕಾಯಂ ಸಿಬ್ಬಂದಿಯಿಲ್ಲ : ಕಳೆದ 14 ವರ್ಷಗಳಲ್ಲಿ ಜಿಲ್ಲೆಗೆ ಒಬ್ಬೇ ಒಬ್ಬ ಕಾಯಂ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಿಲ್ಲ. ಬಳ್ಳಾರಿ ತಾಲೂಕಿಗೆ ಇಬ್ಬರು ಆಹಾರ ಸುರಕ್ಷತಾ ಅಧಿಕಾರಿಗಳು, ಇಬ್ಬರು ಡಾಟಾ ಎಂಟ್ರಿ ಆಪರೇಟರ್, ಒಬ್ಬ ವಾಹನ ಚಾಲಕ ಸೇರಿ ಉಳಿದೆಲ್ಲ ತಾಲೂಕುಗಳಿಗೆ ತಲಾ ಒಬ್ಬ ಆಹಾರ ಸುರಕ್ಷತಾ ಅಧಿಕಾರಿಗಳನ್ನು ನಿಯೋಜಿಸಬೇಕಿತ್ತು. ನಗರದಲ್ಲಿ ಮಾತ್ರ ಗುತ್ತಿಗೆ ಆಧಾರದಲ್ಲಿ ಚಾಲಕ ಸೇರಿ ಮೂವರು ಸಿಬ್ಬಂದಿ ನಿಯೋಜಿಸಲಾಗಿದೆ. ಉಳಿದಂತೆ ಆಹಾರ ಸುರಕ್ಷತಾ ಅಧಿಕಾರಿಗಳನ್ನಾಗಿ ಆಯಾ ತಾಲೂಕು ಆರೋಗ್ಯ ಅಧಿಕಾರಿಗಳಿಗೆ (ಟಿಎಚ್‌ಒ)ಗಳಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಆರೋಗ್ಯ ಇಲಾಖೆಯಲ್ಲಿ ನಾನಾ ಕೆಲಸದ ಒತ್ತಡದ ಹಿನ್ನಲೆ ಸಮಯಕ್ಕೆ ಅನುಸಾರವಾಗಿ ಜಿಲ್ಲೆಯಲ್ಲಿ ದಾಳಿಗಳು ನಡೆದಯಾಗಿದೆ.
229 ಮಾದರಿ ಸಂಗ್ರಹ : ಜಿಲ್ಲೆಯ ಆಹಾರ ಸುರಕ್ಷತಾ ಇಲಾಖೆಯಲ್ಲಿರುವ ಹೊರ ಗುತ್ತಿಗೆ ಸಿಬ್ಬಂದಿಯೇ ಕಳೆದ ಮೂರು ವರ್ಷಗಳಲ್ಲಿ ನಾನಾ ಕಡೆದ ದಾಳಿ ನಡೆಸಿ 229 ಆಹಾರ ಮಾದರಿ ಸಂಗ್ರಹಿಸಿದ್ದಾರೆ. ಈ ಪೈಕಿ 12 ಮಾದರಿಗಳ ಆಹಾರ ಸೇವನೆಗೆ ಸುರಕ್ಷಿತವಲ್ಲ ಎಂಬುದು ದೃಢವಾಗಿವೆ. ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಆರು ಮಾದರಿಗಳ ಆಹಾರಗಳಲ್ಲಿ ಪೌಷ್ಠಿಕಾಂಶ, ಕೊಬ್ಬಿನಂಶ ಕಡಿಮೆ ಪ್ರಮಾಣದಲ್ಲಿದ್ದು, ಸಬ್ ಸ್ಟಾೃಂಡರ್ಡ್ ಎಂದು ದೃಢಪಟ್ಟಿದೆ. ಈ ಪೈಕಿ ಐದು ಪ್ರಕರಣದಲ್ಲಿ 2.25 ಲಕ್ಷ ರೂ. ದಂಡ ವಿಧಿಸಿ ಕ್ರಮಕೈಗೊಳ್ಳಲಾಗಿದೆ.
ಅವೈಜ್ಞಾನಿಕ ಎಣ್ಣೆ ಬಳಕೆ ಆರೋಪ : ನಗರ ಸೇರಿ ಜಿಲ್ಲೆಯ ವಿವಿಧ ಪಟ್ಟಣ, ನಗರಗಳಲ್ಲಿನ ರಸ್ತೆಬದಿಯ ಚಿಕನ್ ಕಬಾಬ್ ಬಂಡಿಗಳಲ್ಲಿ ‘ಅಡುಗೆ ಎಣ್ಣೆ’ಯನ್ನು ಅವೈಜ್ಞಾನಿಕವಾಗಿ ಬಳಸಲಾಗುತ್ತಿದೆ. ಕಬಾಬ್ ಕರಿಯುವ ಎಣ್ಣೆ ಒಮ್ಮೆ ಮಾತ್ರ ಕಾಯಿಸಬೇಕು. ಆದರೆ, ಕಬಾಬ್ ಬಂಡಿಗಳವರು, ದಿನವಿಡೀ ಕಾಯಿಸುತ್ತಾರೆ. ಇಡೀ ಕಾದ ಎಣ್ಣೆ ವೈಜ್ಞಾನಿಕ ಪದ್ಧತಿಯಲ್ಲಿ ವಿಲೇವಾರಿ ಸಹ ಮಾಡದೆ, ಮರುದಿನ ಅದೇ ಎಣ್ಣೆಗೆ ಒಂದಷ್ಟು ಅಡುಗೆ ಎಣ್ಣೆಯನ್ನು ಬೆರೆಸಿ ಪುನಃ ಕಾಯಿಸುತ್ತಾರೆ ಎಂಬ ಆರೋಪ ಬಲವಾಗಿದೆ.
ಕೋಟ್.... ಜಿಲ್ಲೆಯ ಆಹಾರ ಸುರಕ್ಷತಾ ಇಲಾಖೆಯಲ್ಲಿ ಕಾಯಂ ಸಿಬ್ಬಂದಿ ನೇಮಿಸುವುದರ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಜತೆಗೆ ಹೋಟೆಲ್‌ಗಳಲ್ಲಿ ಗುಣಮಟ್ಟ ಪರಿಶೀಲಿಸಲು ಕ್ರಮವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು.- ಕೆ.ನಾಗೇಂದ್ರ ಪ್ರಸಾದ್, ಡಿಸಿ, ಬಳ್ಳಾರಿ.