ಕೋಟೆ ಸಹಿಪ್ರಾ ಶಾಲೆಯಲ್ಲಿ ಶೌಚಗೃಹ ನಿರ್ಮಿಸುತ್ತಿರುವುದು.
ಕಂಪ್ಲಿ: ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಎಂಟು ದಿನಗಳಿಂದ ವಿದ್ಯುತ್ ಇಲ್ಲದೆ ವಿದ್ಯಾರ್ಥಿಗಳು ನಾನಾ ಸೌಲಭ್ಯಗಳಿಂದ ವಂಚಿತರಾಗುವಂತಾಗಿದೆ.
ಒಂದೇ ಆವರಣದಲ್ಲಿರುವ ಈ ಎರಡು ಶಾಲೆಗಳಿಗೆ ಜಿಪಂನ 4.20 ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ ನಿರ್ಮಿಸುವಾಗ ವೈರ್ ಅಡ್ಡಿಯಾಗಲಿದೆ ಎಂದು ಗುತ್ತಿಗೆದಾರರು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಎಂಟು ದಿನಗಳಾದರೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಶುದ್ಧ ಕುಡಿವ ನೀರು ದೊರೆಯದಂತಾಗಿದೆ.
ಶೌಚಗೃಹ ನಿರ್ಮಾಣ ಕಾರ್ಯ ನಿಧಾನಗತಿಯಲ್ಲಿ ಸಾಗಿರುವುದರಿಂದ ವಿದ್ಯಾರ್ಥಿಗಳು ಶೌಚಕ್ಕಾಗಿ ಮನೆಗೆ ಹೋಗುತ್ತಿದ್ದಾರೆ. ಶಾಲೆ ಕಿಟಕಿಗಳ ಹೊರ ಭಾಗದಲ್ಲಿ ಸ್ಥಳೀಯರು ಸಾಮಗ್ರಿಗಳನ್ನು ಇಟ್ಟಿರುವುದರಿಂದ ತರಗತಿ ಕೋಣೆಗಳಿಗೆ ನೈಸರ್ಗಿಕ ಗಾಳಿ-ಬೆಳಕು ಸಿಗದಂತಾಗಿದೆ. ವಿದ್ಯುತ್ ಸಂಪರ್ಕ ಕೂಡ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಕತ್ತಲಲ್ಲಿ ಕುಳಿತುಕೊಳ್ಳುವಂತಾಗಿದೆ.