ಬಳ್ಳಾರಿಯ ಎಸ್‌ಎಸ್‌ಎ ಕಾಲೇಜು ಮುಂಭಾಗದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ, ಎಐಡಿಎಸ್‌ಒ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ಸಂಘಟನೆ ಪದಾಧಿಕಾರಿಗಳಾದ ಅಜಯ್ ಕಾಮತ್, ಈರಣ್ಣ, ಮಂಜುನಾಥ, ಎಂ.ಶಾಂತಿ, ಅನುಪಮ, ಉಮಾ, ಸಮೀರ್, ಸೌಮ್ಯ, ವೈಷ್ಣವಿ ಇತರರಿದ್ದರು.
- ಸೋರಿಕೆ ಕೇವಲ ಒಂದು ಪರೀಕ್ಷಾ ಸಂಸ್ಥೆಯ ವೈಪಲ್ಯ
- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಸಂಪೂರ್ಣವಾಗಿ ರದ್ದುಗೊಳಿಸಿ
ಬಳ್ಳಾರಿ : ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆ ಪರೀಕ್ಷಾ ರದ್ದುಗೊಳಿಸಿರುವುದು ಖಂಡಿಸಿ, ಇಲ್ಲಿನ ಎಸ್‌ಎಸ್‌ಎ ಕಾಲೇಜು ಮುಂಭಾಗದಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ಸಂಘಟನೆಯಿಂದ ಗುರುವಾರ ಪ್ರತಿಭಟನೆ ನಡೆಯಿತು.
ಸಂಘಟನೆ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದ ಕೊಪ್ಪ ಮಾತನಾಡಿ, ಪದೇಪದೆ ಮರುಕಳುಸುತ್ತಿರುವ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕೇವಲ ಒಂದು ಪರೀಕ್ಷಾ ಸಂಸ್ಥೆಯ ವೈಪಲ್ಯವಲ್ಲ. ಇದು ಲಕ್ಷಾಂತರ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಬೆವರು ಮತ್ತು ಕನಸುಗಳ ಮೇಲೆ ಎಸಗುತ್ತಿರುವ ಘೋರ ದೌರ್ಜನ್ಯವಾಗಿದೆ.
ಆದ್ದರಿಂದ ದೇಶದ ನಂಬಿಕೆ ಕಳೆದುಕೊಂಡಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಸಂಪೂರ್ಣವಾಗಿ ರದ್ದುಗೊಳಿಸಬೇಕು. ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಇರುವ ವ್ಯಕ್ತಿಗಳು ಮತ್ತು ಕೋಚಿಂಗ್ ಮಾಫಿಯಾ ಪತ್ತೆ ಹಚ್ಚಲು ಉನ್ನತ ಮಟ್ಟದ ಸ್ವತಂತ್ರ ನ್ಯಾಯಾಂಗ ತನಿಖೆಯಾಗಬೇಕು. ತಪ್ಪಿಸ್ತರಿಗೆ ನಿದರ್ಶನಿಯ ಶಿಕ್ಷೆಯಾಗಬೇಕು.
ಪ್ರವೇಶಾ ಪರೀಕ್ಷಾ ಪದ್ಧತಿ ಸಮಗ್ರವಾಗಿ ಬದಲಿಸಿ, ಅದು ಸಾಮಾನ್ಯರಿಗೂ ಲಭ್ಯವಿರುವಂತೆ ಪಾರದರ್ಶಕ ಮತ್ತು ಖಾಸಗಿ ವಾಣಿಜ್ಯ ಹಿತಾಸಕ್ತಿಗಳಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು. ಈ ಅನ್ಯಾಯದ ವಿರುದ್ಧ ಹೋರಾಡಲು ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಶಿಕ್ಷಣ ಪ್ರೇಮಿ ಸಮುದಾಯದ ಮುಂದೆ ಬರಬೇಕು ಎಂದು ಕರೆ ನೀಡಿದರು.