ವೈ.ಎಂ.ಸತೀಶ್ 
ಬಳ್ಳಾರಿ

ನಾಗೇಂದ್ರ ಆ.13ರೊಳಗೆ ರಾಜೀನಾಮೆ ನೀಡಲಿ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಎಂಎಲ್ಸಿ ವೈ.ಎಂ.ಸತೀಶ್ ಆಗ್ರಹ

ಬಳ್ಳಾರಿ :

ರಾಜ್ಯ ಸರ್ಕಾರ ಆ.13ರೊಳಗೆ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯದಿದ್ದರೆ, ಸದನದ ಒಳಗೂ ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿ ಉಗ್ರ ಹೋರಾಟ ನಡೆಸಲಿದೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಿರುವುದನ್ನು ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಜಾರಿ ನಿರ್ದೇಶನಾಲಯ (ಇಡಿ) ಕೂಡ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದು, ಇನ್ನೂ ತನಿಖೆ ನಡೆಯುತ್ತಿದೆ. ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದ ಹೊಣೆ ಹೊತ್ತು ಸಚಿವ ಬಿ. ನಾಗೇಂದ್ರ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ನೀಟ್ ಪರೀಕ್ಷೆ ಅಕ್ರಮದ ನೆಪವಿಟ್ಟುಕೊಂಡು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ರಾಹುಲ್ ಗಾಂಧಿ, ಜಾರ್ಖಂಡ್‌ನಲ್ಲಿ ಜೆಪಿಎಸ್‌ಸಿ ಹಗರಣದ ವಿರುದ್ಧ ಕಳೆದ 17 ದಿನಗಳಿಂದ ವಿದ್ಯಾರ್ಥಿಗಳು ಹೋರಾಡುತ್ತಿದ್ದರೂ ಧ್ವನಿ ಎತ್ತುತ್ತಿಲ್ಲ. ಜಾರ್ಖಂಡ್‌ನಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಕ್ರೂರವಾಗಿ ಲಾಠಿಚಾರ್ಜ್ ನಡೆಸಿದ್ದರೂ, ವಿಪಕ್ಷ ನಾಯಕ ರಾಹುಲ್ ಗಾಂಧಿ ಒಂದು ಮಾತನ್ನೂ ಆಡದೆ ಮೌನಕ್ಕೆ ಶರಣಾಗಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯದರ್ಶಿ ದರಪ್ಪ ನಾಯಕ ಮಾತನಾಡಿ, ಸಚಿವ ಬಿ. ನಾಗೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಬಿಜೆಪಿ ಹಾಗೂ ಎಸ್‌ಟಿ (ಪರಿಶಿಷ್ಟ ಪಂಗಡ) ಸಮುದಾಯದ ನೇತೃತ್ವದಲ್ಲಿ ನಗರದ ಡಿಸಿ ಕಚೇರಿ ಮುಂಭಾಗದಲ್ಲಿ ಆ.17ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಹೇಳಿದರು. ಮುಖಂಡರಾದ ಬಿ.ಕೆ.ಸುಂದರ್, ಅಡವಿ ಸ್ವಾಮಿ, ಎಚ್.ಹನುಮಂತಪ್ಪ, ಮುರಾರಿ ಗೌಡ, ರವಿಕುಮಾರ್ ಪುಷ್ಪಾ ಲತಾ ಇತರರಿದ್ದರು.