ಸಂಡೂರಿನ ಎಸ್‌ಆರ್‌ಎಸ್ ಸಹ ವಸತಿ ಶಾಲೆಯಲ್ಲಿ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ರಾಜವಂಶಸ್ಥೆ ಸೂರ್ಯಪ್ರಭಾ ಅಜಯ್ ರಾಜೆ ಘೋರ್ಪಡೆ ಬಹುಮಾನ ವಿತರಿಸಿದರು. ಶಿವಪುರ ಶಿಕ್ಷಣ ಸಮಿತಿ ಕಾರ್ಯದರ್ಶಿ ಆಶಿಯಾಬಾನು, ಪ್ರಾಚಾರ್ಯ ಮುರಳಿಕೃಷ್ಣ ಇದ್ದರು.
- ಎಸ್‌ಆರ್‌ಎಸ್ ಸಹ ವಸತಿ ಶಾಲೆ
- ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮ
- ವಿಜ್ಞಾನ, ಇತಿಹಾಸ ವಸ್ತು ಪ್ರದರ್ಶನ
ಶಿಕ್ಷಕಿ ಪ್ರತಿಭಾ ಜೀರಗಿ ಬಣ್ಣನೆ | ಶಾಲೆ ಸಂಸ್ಥಾಪಕರ ದಿನಾಚರಣೆ
ಸಂಡೂರು: ಮಾಜಿ ಸಚಿವ ಎಂ.ವೈ.ಘೋರ್ಪಡೆ ಅವರು ಶಾಲೆಯ ಪ್ರತಿಯೊಬ್ಬ ಶಿಕ್ಷಕರಿಗೂ ಮಾರ್ಗದರ್ಶಕರಾಗಿದ್ದರು ಹಾಗೂ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಕರಾಗಿದ್ದರು ಎಂದು ಶಿಕ್ಷಕಿ ಪ್ರತಿಭಾ ಜೀರಗಿ ಹೇಳಿದರು.
ಪಟ್ಟಣದ ಎಸ್‌ಆರ್‌ಎಸ್ ಸಹ ವಸತಿ ಶಾಲೆಯಲ್ಲಿ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಎಂ.ವೈ.ಘೋರ್ಪಡೆ ಅವರು ನಮ್ರತೆಯ ಪ್ರತಿರೂಪವಾಗಿದ್ದರು ಮಕ್ಕಳ ಮೇಲೆ ಆಗಾಧ ಪ್ರೀತಿ ಹೊಂದಿದ್ದರು. ಶಿಕ್ಷಕರನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದರು ಎಂದು ತಿಳಿಸಿದರು.
ಶಾಲಾ ವಾರ್ಷಿಕೋತ್ಸವಕ್ಕೆ ಸಂಬಂಧಿಸಿದಂತೆ ಎಂ.ವೈ.ಘೋರ್ಪಡೆ ಅವರು ತೋರುತ್ತಿದ್ದ ಆಸಕ್ತಿ, ಪ್ರೀತಿ, ಉತ್ಸಾಹಗಳನ್ನು ವರ್ಣಿಸಲು ಸಾಧ್ಯವಿಲ್ಲ. ಶಾಲೆಯ ವಿಜ್ಞಾನ, ಇತಿಹಾಸ ಮುಂತಾದ ವಸ್ತು ಪ್ರದರ್ಶನಗಳನ್ನು ಏರ್ಪಡಿಸಲು ತೋರುತ್ತಿದ್ದ ಆಸಕ್ತಿ ಅವರ್ಣನೀಯ. ಕೊನೆಯ ದಿನಗಳಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ನಿತ್ಯ ಇಂಗ್ಲಿಷ್ ಪಾಠ ಮಾಡುತ್ತಿದ್ದರು. ಒಬ್ಬ ಯಶಸ್ವಿ ರಾಜಕಾರಣಿಯಾಗಿ, ಮುತ್ಸದ್ದಿಯಾಗಿ ಶಾಲಾ ಮಕ್ಕಳೊಂದಿಗೆ ಉತ್ಸಾಹದಿಂದ ಕಾಲ ಕಳೆಯುತ್ತಿದ್ದ ಇನ್ನೊಬ್ಬ ವ್ಯಕ್ತಿ ಬಹುತೇಕ ಸಿಗಲಾರರು. ಅವರ ಅಧಿಕಾರಾವಧಿಯಲ್ಲಿ ಕೆಲಸ ಮಾಡಿದ್ದು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ ಎಂದು ಪ್ರತಿಭಾ ಜೀರಗಿ ಹೇಳಿದರು.
ರಾಜವಂಶಸ್ಥೆ ಸೂರ್ಯಪ್ರಭಾ ಅಜಯ್ ರಾಜೆ ಘೋರ್ಪಡೆ ಅವರು ಎಂ.ವೈ.ಘೋರ್ಪಡೆ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಎಂ.ವೈ.ಘೋರ್ಪಡೆ ಕುರಿತು ವಿದ್ಯಾರ್ಥಿಗಳು ಪ್ರದರ್ಶಿಸಿದ ಕಿರುರೂಪಕ ಮನ ಸೆಳೆಯಿತು.
2024-25ನೇ ಸಾಲಿನಲ್ಲಿ ಅತ್ಯುತ್ತಮ ಅಂಕ ಪಡೆದ ಶಾಲೆಯ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ಶಿಕ್ಷಕರಾದ ಅಬ್ದುಲ್ ಮುಸವ್ವರ್, ಮೋಹನ್ ನಿರ್ವಹಿಸಿದರು.