ಬಳ್ಳಾರಿ : ಸಂಡೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಂದೇ ಕುಟುಂಬದ ನಾಲ್ವರನ್ನು ಬಂಧಿಸಲಾಗಿದೆ.
ಮಾದಾಪುರ ಗ್ರಾಮದ ಎಚ್. ಗೋಪಾಲ (42) ಮೃತ. ಗೋವಿಂದ (ಪತಿ), ಅಂಬಮ್ಮ (ಪತ್ನಿ), ಪ್ರಜ್ವಲ್ (ಮಗ), ರಮೇಶ (ಮಗ) ಬಂಧಿತರು. ಫೆ. 28ರಂದು ಗೋಪಾಲನು ಆರೋಪಿ ಗೋವಿಂದನ ಮನೆ ಬಳಿ ತೆರಳಿ, ನಿನ್ನ ಹೆಂಡತಿ ಅಂಬಮ್ಮ ನನ್ನ ಜೊತೆ ಫೋನ್‌ನಲ್ಲಿ ಮಾತನಾಡಬೇಕು ಎಂಬುದಾಗಿ ಗಲಾಟೆ ಮಾಡಿದ್ದಾನೆ. ಅಲ್ಲದೆ, ಪತಿಯ ಮುಂದೆಯೇ ಅಂಬಮ್ಮಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮಾತಿನ ಚಕಮಕಿ ತಾರಕಕ್ಕೇರಿದ್ದು, ಗೋವಿಂದ ಹಾಗೂ ಆತನ ಮಕ್ಕಳಾದ ಪ್ರಜ್ವಲ್ ಮತ್ತು ರಮೇಶ್ ಸೇರಿ ಗೋಪಾಲನ ಜತೆ ಜಗಳವಾಡಿದ್ದಾರೆ. ಸಿಟ್ಟಿನ ಭರದಲ್ಲಿ ಗೋವಿಂದನು ಮಚ್ಚಿನಿಂದ ಗೋಪಾಲನ ತಲೆಗೆ ಹೊಡೆದಿದ್ದಾನೆ. ಗಂಭೀರ ಗಾಯಗೊಂಡ ಗೋಪಾಲ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಶವವನ್ನು ಗ್ರಾಮದ ಸಮೀಪದ ಜಮೀನಿನಲ್ಲಿ ಬಿಸಾಡಿ ಸ್ಥಳದಿಂದ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ತನಿಖೆಯಲ್ಲಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಕುರಿತು ಕುಡುತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.