ಬಳ್ಳಾರಿಯ ಗಡಗಿ ಚನ್ನಪ್ಪ ವೃತ್ತದಲ್ಲಿ ಸಂಸದ ಈ.ತುಕಾರಾಮ್ ಅಶ್ಲೀಲ ಪದ ಬಳಕೆ ಖಂಡಿಸಿ, ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟನೆ ನಡೆಯಿತು. ಬಿಜೆಪಿ ರಾಜ್ಯ ಮಹಿಳಾ ಉಪಾಧ್ಯಕ್ಷೆ ಡಾ.ಅರುಣಾ, ಮುಖಂಡರಾದ ಗುರ‌್ರಂ ವೆಂಕಟರಮಣ, ಕೆ.ಎಸ್.ದಿವಾಕರ್, ಗುಡುಗಂಟಿ ಹನುಮಂತು, ಕೇಶವ, ಕೆ.ಗೋವಿಂದರಾಜುಲು, ಗುರುಲಿಂಗನಗೌಡ, ಸಿದ್ದೇಶ್, ಪುಷ್ಪ, ಚಾಂದಿನಿ ಇತರರಿದ್ದರು. 
ಬಳ್ಳಾರಿ

ಸಂಸದ ಅಶ್ಲೀಲ ಪದ ಬಳಕೆ ಖಂಡನೀಯ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟನೆ
  • ಜಿಲ್ಲೆಯ ಅಭಿವೃದ್ಧಿಯಲ್ಲಿ ವಿಫಲ
ಬಳ್ಳಾರಿ : ಸಂಸದ ಈ.ತುಕಾರಾಮ್ ಅವರು ಸರ್ವಿಸ್ ರಸ್ತೆಯ ಕಳಪೆ ಕಾಮಗಾರಿ ಬಗ್ಗೆ ಪ್ರಶ್ನಿಸಿದವರ ವಿರುದ್ಧ ಅಶ್ಲೀಲ ಪದ ಬಳಕೆ ಖಂಡಿಸಿ, ಇಲ್ಲಿನ ಗಡಗಿ ಚನ್ನಪ್ಪ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟನೆ ನಡೆಯಿತು. ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ, ಸಂಸದ ಈ.ತುಕಾರಾಮ್ ಅವರ ಪ್ರತಿಕೃತಿ ದಹಿಸಿ ಅಕ್ರೋಶ ಹೊರಹಾಕಿದರು. ತಕ್ಷಣವೇ ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬುದಾಗಿ ಘೋಷಣೆಗಳನ್ನು ಕೂಗಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ ಮಾತನಾಡಿ, ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಾಣಾಪುರ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 50ರ ಮೇಲ ಸೇತುವೆ ಹಾಗೂ ಸರ್ವಿಸ್ ರಸ್ತೆಯೂ 33 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕಾಮಗಾರಿಯಲ್ಲಿ ಗುಣಮಟ್ಟದ ಮಾನದಂಡಗಳನ್ನು ಪಾಲಿಸದೆ ಮಣ್ಣಿನ ಬದಲಾಗಿ ಫ್ಲೈಆಶ್ ಬಳಸಿ ರಸ್ತೆ ನಿರ್ಮಿಸಲಾಗಿದೆ.
ಕಾಮಗಾರಿ ಪೂರ್ಣಗೊಂಡು ಹತ್ತು ದಿನಗಳು ಕಳೆಯುವಷ್ಟರಲ್ಲಿ ಸರ್ವಿಸ್ ರಸ್ತೆ ಕುಸಿದಿದ್ದು, ಈ ವೇಳೆ ಟ್ರಕ್‌ವೊಂದು ರಸ್ತೆಯಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಕಳಪೆ ಕಾಮಗಾರಿ ಬಗ್ಗೆ ಪ್ರಶ್ನೆ ಮಾಡಿದ ಸಾರ್ವಜನಿಕರೊಂದಿಗೆ ಸಂಸದ ಈ.ತುಕಾರಾಮ್ ಅಶ್ಲೀಲ ಪದ ಈ ರೀತಿಯ ಪದ ಬಳಸಿರುವುದು ಖಂಡನೀಯ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಜಿಲ್ಲೆಯ ಅಭಿವೃದ್ಧಿಯಲ್ಲಿ ವಿಫಲರಾಗಿರುವ ಸಂಸದ ಈ.ತುಕಾರಾಮ್ ಅವರು ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
=====