ಜಿ.ಜನಾರ್ದನರೆಡ್ಡಿ 
ಬಳ್ಳಾರಿ

ಸಂಸದ ಸೇರಿ ಶಾಸಕರು ರಾಜೀನಾಮೆ ನೀಡಲಿ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಸೋಲು ಗೆಲುವು ರಾಜಕೀಯದಲ್ಲಿ ಸಾಮಾನ್ಯ
ಬಳ್ಳಾರಿ : ಸಂಸದ ಈ.ತುಕಾರಾಮ್, ಗ್ರಾಮೀಣ ಶಾಸಕ ಬಿ.ನಾಗೇಂದ್ರ ಹಾಗೂ ಅವಳಿ ಜಿಲ್ಲೆಯ ಕಾಂಗ್ರೆಸ್‌ನ ಹಾಲಿ ಶಾಸಕರು ರಾಜೀನಾಮೆ ನೀಡಿ ಚುನಾವಣೆ ಎದುರಿಸಲಿ. ನಾವು ನಾಳೆಯೇ ಚುನಾವಣೆಗೆ ಸಿದ್ಧಎಂದು ಶಾಸಕ ಜಿ.ಜನಾರ್ದನರೆಡ್ಡಿ ಸವಾಲು ಹಾಕಿದರು. ನಗರದ ಗೃಹ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿಯ ಹತ್ತು ಶಾಸಕರು ಹಾಗೂ ಸಂಸದ ಸ್ಥಾನವನ್ನು ಗೆಲ್ಲಿಸುವ ಶಕ್ತಿ ನಮಗಿದೆ. ಸೋಲು ಗೆಲುವು ರಾಜಕೀಯದಲ್ಲಿ ಸಾಮಾನ್ಯ. ಒಂದೇ ವರ್ಷದಲ್ಲಿ ಎರಡು ಬಾರಿ ಮಾಜಿ ಸಚಿವ ಬಿ.ಶ್ರೀರಾಮುಲು ಸೋತರೆಂದು ನಿಂದಿಸಲಾಗಿದೆ.
ರಾಜ್ಯದ ಮಾಜಿ ಸಿಎಂ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ಎಸ್.ಎಂ.ಕೃಷ್ಣ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಹಲವು ನಾಯಕರು ಸೋತು ಗೆದ್ದಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಎಐಸಿಸಿ ಅಧ್ಯಕ್ಷರಾಗಲಿಲ್ಲವೇ? ಎಂದು ಪ್ರಶ್ನಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ಮುಂಬೈ ಮೂಲದ ನೇಹಾ ಕಲಂ ಮನ್ಸೂರಿ, ಜಾಹರ್ ಕಲಂ ಮನ್ಸೂರಿ ಹಾಗೂ ಕಲಂ ಶಕೂರ್ ಮನ್ಸೂರಿ ಅವರ ಖಾತೆಗಳಿಗೆ 6.5 ಕೋಟಿ ರೂ. ವರ್ಗಾವಣೆಯಾಗಿದೆ ಎಂಬ ಆರೋಪವಿದೆ. ಈ ಮೂವರು ಯಾರು? ನಾಗೇಂದ್ರ ಅವರೊಂದಿಗೆ ಏನು ಸಂಬಂಧ? ನಿಗಮದ ಖಾತೆಯಿಂದಲೇ ಹಣ ಅವರ ಖಾತೆಗಳಿಗೆ ಹೇಗೆ ವರ್ಗಾವಣೆಯಾಗಿದೆ ಎಂಬುದು ನಾಗೇಂದ್ರ ಸ್ಪಷ್ಟಪಡಿಸಬೇಕು ಎಂದರು. ವಾಲ್ಮೀಕಿ ಹಗರಣದಲ್ಲಿ ಶಾಸಕ ಅಪ್ತ ಕಾರ್ಯದರ್ಶಿ ವಿಜಯಕುಮಾರ್ ಸೇರಿ 24 ಮಂದಿ ನೇರವಾಗಿ ಭಾಗಿಯಾಗಿದ್ದಾರೆ. ನೂರಾರು ಖಾತೆಗಳಿಗೆ ಹಣ ವರ್ಗಾವಣೆಯಾಗಿ ಬಳಿಕ ಹಣ ಹಿಂಪಡೆಯಲಾಗಿದೆ ಎಂಬ ವಿಚಾರವೂ ತನಿಖೆಯಿಂದ ಬೆಳಕಿಗೆ ಬರಬೇಕು ಎಂದರು.
ನಿಗಮ ಅಧಿಕಾರಿ ಚಂದ್ರಶೇಖರ ಕೇವಲ ಆತ್ಮಹತ್ಯೆ ಎಂಬುದಾಗಿ ಪರಿಗಣಿಸದೆ ಪ್ರಕರಣದ ಹಿನ್ನೆಲೆ ಮತ್ತು ಸರ್ಕಾರದ ಜವಾಬ್ದಾರಿಯ ಬಗ್ಗೆ ತನಿಖೆಯಾಗಬೇಕು. ಮನುಸ್ಮೃತಿ, ಮನುವಾದ ಎಂಬ ಪದಗಳು ಪದೇ ಪದೇ ಬಳಸುತ್ತಿರುವ ನಾಗೇಂದ್ರ, ರಾಜಕೀಯಕ್ಕೆ ಜಾತಿ ಎಳೆದು ತರುವುದು ಸರಿಯಲ್ಲ. ದೇಶವು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ನಡೆಯುತ್ತಿದೆ. ವಾಲ್ಮೀಕಿ ಮಹರ್ಷಿ, ರಾಮಾಯಣ ಹಾಗೂ ಶಂಭುಕನ ಪ್ರಸಂಗದ ಬಗ್ಗೆ ಮಾತನಾಡುವ ಮೊದಲು ಅದರ ಇತಿಹಾಸ ಮತ್ತು ಹಿನ್ನಲೆ ತಿಳಿದುಕೊಳ್ಳಬೇಕು ಎಂದರು. ಶಂಭುಕನ ಕಥೆಯನ್ನೇ ಸರಿಯಾಗಿ ತಿಳಿಯದೆ ಇಂದಿನ ರಾಜಕೀಯಕ್ಕೆ ಹೋಲಿಸುತ್ತಿರುವುದು ಸರಿಯಲ್ಲ. ಬಿಜೆಪಿ ಪಕ್ಷದಿಂದಲೇ ನಾಗೇಂದ್ರ ಅವರ ರಾಜಕೀಯ ಬದುಕು ಆರಂಭವಾಗಿದೆ. ಅದೇ ಪಕ್ಷ ಮನುವಾದಿಗಳ ಪಕ್ಷ ಎಂದು ಈಗ ಟೀಕಿಸುವುದು ಎಷ್ಟರ ಮಟ್ಟಿಗೆ ಸಮಂಜಸ ಎಂದು ಪ್ರಶ್ನಿಸಿದರು.
ಸಂಡೂರು ಶಾಸಕಿ ಅನ್ನಪೂರ್ಣ ಅವರಿಗೆ ಸಚಿವ ಸ್ಥಾನ ನೀಡಿದರೂ ಹೋರಾಟ ಮುಂದುವರಿಯಲಿದೆ. ಈ ಪ್ರಕರಣದಲ್ಲಿ ಸಂಸದ ತುಕಾರಾಮ್ ಅವರ ಪಾತ್ರದ ಬಗ್ಗೆಯೂ ಆರೋಪಗಳಿವೆ. ಈ ಕುರಿತು ಸಾಕ್ಷೃ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ಅವರಿಗೆ ಪ್ರಕರಣದ ಸಂಪೂರ್ಣ ಮಾಹಿತಿ ಇಲ್ಲದಿರಬಹುದು. ಈಗ ಮಾಹಿತಿ ಇದ್ದರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಜ್ವಲಂತ ವಿಷಯಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆ ನಡೆಸಲಾಗುತ್ತಿದೆ. ನಾಗೇಂದ್ರ ರಾಜೀನಾಮೆ ನೀಡಿದರೂ ಪಾದಯಾತ್ರೆ ಮುಂದುವರಿಯಲಿದೆ. ಪಾದಯಾತ್ರೆಗೆ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ ಎಂದರು.
2015ರಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಎರಡು ಬಾರಿ ಬಿ ರಿಪೋರ್ಟ್ ಸಲ್ಲಿಸಲಾಗಿದೆ. ಇದೀಗ ಮೂರನೇ ಬಾರಿಗೆ ಪ್ರಾಸಿಕ್ಯೂಷನ್ ಅನುಮತಿಗೆ ರಾಜ್ಯಪಾಲರ ಬಳಿ ಕಳುಹಿಸಲಾಗಿದೆ ಎಂದು ತಿಳಿಸಿದರು.