ಹೂವಿನಹಡಗಲಿಯಲ್ಲಿ ಎಂ.ಪಿ.ಪ್ರಕಾಶ ಅವರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು. ಸಂಸದ ಈ.ತುಕಾರಾಮ್, ಶಾಸಕ ರಾಘವೇಂದ್ರ ಹಿಟ್ನಾಳ್, ಮಾಜಿ ಶಾಸಕ ಪರಮೇಶ್ವರ ನಾಯ್ಕ, ಚಿತ್ರ ನಿರ್ದೇಶಕ ಟಿ.ಎನ್.ಸೀತಾರಾಂ ಇದ್ದರು.
- ಹೂವಿನಹಡಗಲಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ
ಹೂವಿನಹಡಗಲಿ: ಎಂ.ಪಿ.ಪ್ರಕಾಶ್ ಅವರು ರಾಜಕೀಯ ಮುತ್ಸದ್ದಿ ಮಾತ್ರವಲ್ಲದೆ ಓರ್ವ ಸಾಂಸ್ಕೃತಿಕ ರೂವಾರಿಯಾಗಿದ್ದರು. ರಾಜಕಾರಣಿಗಳಲ್ಲಿ ಪ್ರಕಾಶ್ ಅವರಷ್ಟು ಓದಿದವರು ಬಹಳ ಕಡಿಮೆ. ಅವರು ವಿಚಾರವಂತರಾಗಿದ್ದು, ವೈಚಾರಿಕತೆ ಹಾಗೂ ವೈಜ್ಞಾನಿಕ ದೃಷ್ಟಿಕೋನವನ್ನು ಹೊಂದಿದ್ದರು. ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕಿತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರಂಗಭಾರತಿ ರಂಗಮಂದಿರದ ಆವರಣದಲ್ಲಿ ಶನಿವಾರ ಮಾಜಿ ಉಪಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ್ ಅವರ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು. ಈ ಸಂದರ್ಭ ಸುತ್ತೂರು ಮಠದ ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಸಾನ್ನಿಧ್ಯ ವಹಿಸಿದ್ದರು.
ಶಾಸಕರಾದ ರಾಘವೇಂದ್ರ ಹಿಟ್ನಾಳ್, ಗಣೇಶ್ ಪ್ರಸಾದ್, ಎಲ್. ಕೃಷ್ಣನಾಯ್ಕ, ಅನ್ನಪೂರ್ಣ ತುಕಾರಾಮ್, ಎಂ.ಪಿ. ಲತಾ ಮಲ್ಲಿಕಾರ್ಜುನ, ಸಂಸದ ಈ. ತುಕಾರಾಮ್, ಮಾಜಿ ಶಾಸಕರಾದ ಅಮರೇಗೌಡ ಬಯ್ಯಪುರ, ಪಿ.ಟಿ. ಪರಮೇಶ್ವರನಾಯ್ಕ, ಚಂದ್ರನಾಯ್ಕ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ, ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಂ, ರಂಗ ನಿರ್ದೇಶಕ ಶ್ರೀನಿವಾಸ ಕಪ್ಪಣ್ಣ, ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜ ಮೂರ್ತಿ ಹಾಗೂ ರಂಗಭಾರತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.