ಕಂಪ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಬಳ್ಳಾಪುರದ ಎಂ.ಎಂ.ಬಸವರಾಜಸ್ವಾಮಿ, ನಾಗರತ್ನಮ್ಮ ದಂಪತಿಗೆ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. 
ಬಳ್ಳಾರಿ

ಮಿಶ್ರ ಬೇಸಾಯಕ್ಕೆ ಮುಂದಾಗಿ

ಕಂಪ್ಲಿ: ಮಣ್ಣಿನ ಆರೋಗ್ಯ ಕಾಪಾಡುವ ಮೂಲಕ ಮುಂದಿನ ಪೀಳಿಗೆಗೆ ಫಲವತ್ತಾದ ಜಮೀನು ಬಳುವಳಿಯಾಗಿ ನೀಡುವಲ್ಲಿ ರೈತರು ಜಾಗ್ರತೆ ತೋರಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಎಂ.ದಯಾನಂದ ಹೇಳಿದರು.
ಪಟ್ಟಣದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಕೃಷಿ ವೆಚ್ಚ ಕಡಿಮೆಗೊಳಿಸುವ ಮೂಲಕ ಉತ್ತಮ ಇಳುವರಿ ಪಡೆದು ಲಾಭ ಗಳಿಸುವತ್ತ ರೈತರು ಆಲೋಚಿಸಬೇಕಿದೆ. ರೈತರು ರಸಗೊಬ್ಬರ ಬಿಟ್ಟು ಸಾವಯವ ಗೊಬ್ಬರ ಬಳಸಬೇಕು ಹಾಗೂ ಮಿಶ್ರ ಬೇಸಾಯದಲ್ಲಿ ತೊಡಗಿಸಿಕೊಳ್ಳುವಲ್ಲಿ ಮುಂದಾಗಬೇಕು. ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿಪ್ರದ ನಾರಾಯಣಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿಕರು ನಾನಾ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ಸರ್ಕಾರ ಕೃಷಿ ಮತ್ತು ಕೃಷಿಕರ ಹಿತಾಸಕ್ತಿಗಾಗಿ ಕೃಷಿ ಕ್ಷೇತ್ರವನ್ನು ಬಲಪಡಿಸಲು ಯೋಜನೆಗಳನ್ನು ರೂಪಿಸಿ ರೈತರಿಗೆ ತಲುಪಿಸಬೇಕಿದೆ ಎಂದರು.
ಆತ್ಮಯೋಜನಡಿ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ಸಾವಯವ ಕೃಷಿಕ ಬಳ್ಳಾಪುರದ ಎಂ.ಎಂ.ಬಸವರಾಜಸ್ವಾಮಿಗೆ ನೀಡಿ ಗೌರವಿಸಲಾಯಿತು. ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಉಪ್ಪಾರು ದೊಡ್ಡಬಸಪ್ಪ, ರೈತ ಸಂಘದ ಪದಾಧಿಕಾರಿಗಳಾದ ಪಿ.ನಾರಾಯಣರೆಡ್ಡಿ, ಬಿ.ಸದಾಶಿವಪ್ಪ, ಹಗರಿ ಕೆವಿಕೆಯ ಬೇಸಾಯಶಾಸ್ತ್ರಜ್ಞ ಡಾ.ಎನ್.ಮಂಜುನಾಥ, ಕೃಷಿ ಇಂಜನಿಯರ್ ಡಾ.ಆಶಾ, ರಸಗೊಬ್ಬರ ಮಾರುಕಟ್ಟೆ ಅಭಿವೃದ್ಧಿ ಅಧಿಕಾರಿ ಡಾ.ಪ್ರಕಾಶರೆಡ್ಡಿ, ಕೃಷಿ ಅಧಿಕಾರಿಗಳಾದ ವಿದ್ಯಾವತಿ ಎಸ್.ಹೊಸಮನಿ, ಕೆ.ಸೋಮಶೇಖರ, ಟಿ.ಜ್ಯೋತಿ, ನವ್ಯಾ ಪ್ರಶಾಂತ್ ಇತರರಿದ್ದರು.