ಬಳ್ಳಾರಿ ತಾಲೂಕಿನ ಖರೀದಿ ಕೇಂದ್ರವೊಂದರಲ್ಲಿ ರಾಶಿಯಾಗಿ ಸಂಗ್ರಹಿಸಿದ್ದ ಜೋಳ. 
ಬಳ್ಳಾರಿ

ಖಾತೆಗೆ ಈ ತಿಂಗಳಲ್ಲೇ ಹಣ ಜಮೆ

ಪ್ರಮುಖ ಮುಖ್ಯಾಂಶಗಳು

  • ಕೈ ಸಾಲ ಮಾಡುವ ಹೊರೆ ತಪ್ಪಲಿದೆ
  • ಎಂಎಸ್‌ಪಿಯಡಿ ಧಾನ್ಯಗಳ ಖರೀದಿ
  • ಪ್ರಸ್ತಕ ಕೃಷಿ ಚಟುವಟಿಕೆಗೆ ಅನುಕೂಲ
ಬಳ್ಳಾರಿ : ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ( ಎಂಎಸ್‌ಪಿ) ಯೋಜನೆಯಡಿ ಮುಂಗಾರು ಹಾಗೂ ಹಿಂಗಾರಿನಲ್ಲಿ ಜೋಳ ಮತ್ತು ರಾಗಿ ಧಾನ್ಯ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ತಿಂಗಳಲ್ಲೇ ರೈತರ ಖಾತೆಗೆ ಹಣ ಜಮೆಯಾಗಲಿದೆ. ಇದರಿಂದ ಕೆಲ ದಿನಗಳಲ್ಲೇ ಕೃಷಿ ಚಟುವಟಿಕೆ ಗರಿಗೆದರಿಲಿದೆ. ಬೀಜ, ರಸಗೊಬ್ಬರ ಖರೀದಿ ಹಾಗೂ ಭೂಮಿ ಹದಗೊಳಿಸಲು ಟ್ರಾೃಕ್ಟರ್ ಬಾಡಿಗೆಗೆ ಸೇರಿದಂತೆ ನಾನಾ ವೆಚ್ಚಗಳಿಗೆ ರೈತರು ಕೈ ಸಾಲ ಮಾಡುವ ಹೊರೆ ತಪ್ಪಲಿದೆ.
ಜಿಲ್ಲೆಯಲ್ಲಿ ಎಂಎಸ್ಪಿ ಯೋಜನೆಯಡಿ ಧಾನ್ಯಗಳ ಖರೀದಿಗಾಗಿ ರೈತರಿಗೆ ಸಾಗಣೆ ಹೊರೆ ತಪ್ಪಿಸುವ ಉದ್ದೇಶದಿಂದ ಬಳ್ಳಾರಿ ನಗರ, ಸಂಡೂರು, ಸಿರಗುಪ್ಪ, ಕಂಪ್ಲಿ , ಕುರುಗೋಡು ಹಾಗೂ ತಾಲೂಕು ಮಾತ್ರವಲ್ಲದೇ ಹೋಬಳಿ ಮಟ್ಟದಲ್ಲಿ ಸೇರಿ ಒಟ್ಟು ಹದಿನೇಂಟು ಖರೀದಿ ಕೇಂದ್ರಗಳನ್ನು ತೆರೆಯಲಾಗಿತ್ತು. ಮುಂಗಾರು ಹಂಗಾಮಿನಲ್ಲಿ 8895 ರೈತರು ನೋಂದಾಯಿಸಿದ್ದರು.
ಈ ಪೈಕಿ 8735 ರೈತರು 4, 47,685 ಲಕ್ಷ ಕ್ವಿಂಟಾಲ್ ಹಾಗೂ ಹಿಂಗಾರು ಹಂಗಾಮಿನಲ್ಲಿ 5,601 ರೈತರು 3,01,383 ಲಕ್ಷ ಕ್ವಿಂಟಾಲ್ ಬೆಂಬಲ ಬೆಲೆಯಡಿ ಜೋಳ ಖರೀದಿಸಲಾಗಿದೆ. ಸದ್ಯ, ರಾಜ್ಯ ಸರ್ಕಾರ ನಿಗದಿಪಡಿಸಿರುವ ಬಿಳಿ ಜೋಳ (ಹೈಬ್ರೀಡ್) ಪ್ರತಿ ಕ್ವಿಂಟಾಲ್‌ಗೆ 3,699 ರೂ., ಬಿಳಿ ಜೋಳ (ಮಾಲ್ದಂಡಿ) 3,749 ರೂ. ದರ ನಿಗದಿ ಮಾಡಿದೆ. ಅದರಂತೆ ಪ್ರತಿ ರೈತರಿಂದ ಎಕರೆಗೆ 15 ಕ್ವಿಂಟಾಲ್‌ನಂತೆ ಗರಿಷ್ಠ 150 ಕ್ವಿಂಟಾಲ್ ವರೆಗೆ ಖರೀದಿಸಲಾಗಿದೆ.
ರೈತರಿಂದ ಖರೀದಿಯಾಗಿರುವ ಜೋಳವನ್ನು ಬಳ್ಳಾರಿ, ಸಿರಗುಪ್ಪ, ಕಂಪ್ಲಿ, ಹೊಸಪೇಟೆ, ಗಂಗಾವತಿಯ ವಡ್ಡರಹಟ್ಟಿಯ ರಾಜ್ಯ ಉಗ್ರಾಣದ ನಿಗಮದ ಗೋದಾಮುಗಳಲ್ಲಿ ಸಂಗ್ರಹಿಸಲಾಗಿದೆ. ಸರ್ಕಾರದ ನಿಯದಂತೆ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲಾಗುವುದು. ಸದ್ಯ, ಜಿಲ್ಲಾದ್ಯಂತ ನೋಂದಣಿಯಾಗಿರುವ ರೈತರ ಪೈಕಿ ಇನ್ನೂ 160 ರೈತರು ಜೋಳ ಮಾರಾಟ ಮಾಡಿಲ್ಲ. ಇದರಿಂದ ಖರೀದಿಗೆ 13,241 ಕ್ವಿಂಟಾಲ್ ಜೋಳ ಬಾಕಿಯಿವೆ.
ಕೀಟಗಳು ಕಾಡಲಿವೆ : ಈಗಾಗಲೇ ಮುಂಗಾರು ಹಂಗಾಮಿನ ಜೋಳವನ್ನು ಕಳೆದ ಡಿಸೆಂಬರ್ ತಿಂಗಳ ಕೊನೆಯಲ್ಲಿ ಕಟಾವು ಮಾಡಿ ಸಂಗ್ರಹಿಸಲಾಗಿತ್ತು. ಕಟಾವುಗೊಂಡು ಜೋಳವು ಐದು ತಿಂಗಳು ಕಳೆದಿದೆ. ಕೆಲ ದಿನಗಳಲ್ಲೇ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆ ಮಾಡಿ ಪಡಿತರ ಚೀಟಿ ಫಲಾನುಭವಿಗಳಿಗೆ ವಿತರಿಸಿದ್ದರೆ ಧಾನ್ಯಗಳಿಗೆ ಹುಳು ಬಿದ್ದು ಪುಡಿಯಾಗಿ ಹಾನಿಯಾಗುವ ಸಾಧ್ಯತೆಯಿದೆ. ಏಕೆಂದರೆ, ಬೆಂಬಲ ಬೆಲೆಯಡಿ ಖರೀದಿ ವೇಳೆ ಹಾಳಾದ ಜೋಳಕ್ಕೆ ಗ್ರೇಡರ್‌ಗಳು ರೈತರಿಂದ ಹಣ ವಸೂಲಿ ಮಾಡಿ ಖರೀಸಿದ್ದಾರೆ. ಮಳೆ ಸುರಿದರೆ ಸಂಪೂರ್ಣವಾಗಿ ಜೋಳ ಕೆಡಲಿವೆ. ಕಳೆದ ಎರಡು ವರ್ಷದ ಹಿಂದೆ ಸಂಗ್ರಹಿಸಿದ ಜೋಳವನ್ನು ನ್ಯಾಯ ಬೆಲೆ ಅಂಗಡಿಗಳಿಗೆ ಸೂಕ್ತ ಸಮಯಕ್ಕೆ ವಿತರಿಸದೆ ಪರಿಣಾಮ ಉಪ ಲೋಕಾಯುಕ್ತ ದಾಳಿ ಬಯಲಿಗೆ ಬಂದಿತ್ತು. ಅದರಂತೆ ಈ ವರ್ಷವೂ ಕೂಡ ಜರುಗದಂತೆ ಸರ್ಕಾರ ಎಚ್ಚರ ವಹಿಸಬೇಕಿದೆ.
ರಾಗಿಯೂ ಖರೀದಿ : ಎಂಎಸ್‌ಪಿ ಯೋಜನೆಯಡಿ ರಾಗಿಯೂ ಖರೀದಿಸಲಾಗಿದೆ. ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆದ ಪರಿಣಾಮ ಚೋರನೂರುನಲ್ಲಿ ಮಾತ್ರ ಖರೀದಿ ಕೇಂದ್ರ ತೆರೆಯಲಾಗಿತ್ತು. ಪ್ರತಿ ಕ್ವಿಂಟಾಲ್‌ಗೆ 4,886 ರೂ. ದರ ನಿಗದಿ ಪಡಿಸಿದ್ದು, 2,377 ಕ್ವಿಂಟಾಲ್ ಖರೀದಿ ಕೇಂದ್ರಕ್ಕೆ ನೀಡಲಾಗಿದೆ. ರೈತರಿಗೆ ಆ ಹಣ ಕೂಡ ಈ ತಿಂಗಳಲ್ಲೇ ಖಾತೆಗೆ ಜಮೆಯಾಗಲಿದೆ.
"

ಕೋಟ್..... ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಎಂಎಸ್‌ಪಿ ಯೋಜನೆಯಡಿ ಜೋಳ ಖರೀದಿ ಸಮಯ ಪೂರ್ಣಗೊಂಡಿದೆ. ರೈತರ ಖಾತೆಗೆ ಹಣ ಈ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಖಾತೆಗೆ ಜಮೆಯಾಗುವ ಸಾಧ್ಯತೆಯಿದೆ.- ಕೆ.ಆರ್.ದೇವರಾಜ್, ಉಪನಿರ್ದೇಶಕ, ಆಹಾರ ಇಲಾಖೆ, ಬಳ್ಳಾರಿ.

02 ಎರ‌್ರಿಸ್ವಾಮಿ 02
ಬಳ್ಳಾರಿ ತಾಲೂಕಿನ ಖರೀದಿ ಕೇಂದ್ರವೊಂದರಲ್ಲಿ ರಾಶಿಯಾಗಿ ಸಂಗ್ರಹಿಸಿದ್ದ ಜೋಳ.