ಕಂಪ್ಲಿಯಲ್ಲಿ ಶ್ರೀ ಕನ್ಯಕಾಪರಮೇಶ್ವರಿ ಮೂರ್ತಿಯನ್ನು ಪ್ರತಿಮೆಯನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು. 
ಬಳ್ಳಾರಿ

ವ್ಯಾಪಾರ-ವಹಿವಾಟಿನಲ್ಲಿ ಆಧುನಿಕತೆ ಅಗತ್ಯ

ಅಶೋಕ್ ಕುಮಾರ್ ಎನ್
ಕಂಪ್ಲಿ: ವಾಸವಿದೇವಿಯ ಅಹಿಂಸಾ ತತ್ವ ಜಗತ್ತಿಗೆ ಆದರ್ಶವಾಗಿದೆ ಎಂದು ಶ್ರೀ ನಗರೇಶ್ವರ ದೇವಸ್ಥಾನದ ಧರ್ಮಕರ್ತ ವೈ.ಚಂದ್ರಮೋಹನ ಶ್ರೇಷ್ಠಿ ಹೇಳಿದರು.
ಪಟ್ಟಣದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ 4644ನೇ ವಾಸವಿ ಜಯಂತ್ಯುತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಆರ್ಯವೈಶ್ಯ ಸಮುದಾಯದವರು ಉನ್ನತ ಶಿಕ್ಷಣ ಪಡೆಯುವುದರೊಂದಿಗೆ ಪ್ರಮುಖ ಹುದ್ದೆ ಗಳಿಸುವಲ್ಲಿ ಮುಂದಾಗಬೇಕು. ಆಧುನಿಕತೆಗೆ ತಕ್ಕಂತೆ ವ್ಯಾಪಾರ-ವ್ಯವಹಾರಗಳಲ್ಲಿ ತೊಡಗಿಕೊಳ್ಳಬೇಕು ಎಂದರು.
ಇದಕ್ಕೂ ಮುನ್ನ ಶ್ರೀ ಪೇಟೆ ಬಸವೇಶ್ವರ ದೇವಸ್ಥಾನದಿಂದ ಶ್ರೀ ನಗರೇಶ್ವರ ದೇವಸ್ಥಾನದವರೆಗೆ ಕಳಸ ಮೆರವಣಿಗೆ ನಡೆಯಿತು. ನಗರೇಶ್ವರ, ಪಾರ್ವತಿ, ಕನ್ಯಕಾಪರಮೇಶ್ವರಿದೇವಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ನಡೆದವು. ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕ್ರೀಡೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ರಕ್ತದಾನ ಶಿಬಿರದಲ್ಲಿ 32 ಯೂನಿಟ್‌ಗೂ ಹೆಚ್ಚು ರಕ್ತ ಸಂಗ್ರಹಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಶ್ರೀ ನಗರೇಶ್ವರ, ಪಾರ್ವತಿ ಮತ್ತು ಕನ್ಯಕಾಪರಮೇಶ್ವರಿ ಮೂರ್ತಿಗಳನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಆರ್ಯವೈಶ್ಯ ಸಮುದಾಯದ ನಾನಾ ಸಂಸ್ಥೆಗಳ ಅಧ್ಯಕ್ಷರಾದ ಡಿ.ಮಂಜೇಶ್, ಡಿ.ವಿ.ಸುಬ್ಬಾರಾವ್, ಟಿ.ರಮಾವೆಂಕಟರಮಣ, ಜಿ.ರಾಜಾರಾವ್, ಜಿ.ಬಿ.ಕೋಟೇಶ್ವರ, ಕೆ.ಜಗದೀಶ್ ಇತರರಿದ್ದರು.