ಬಳ್ಳಾರಿ ಹೊರವಲಯದ ಆಲದಹಳ್ಳಿಯಲ್ಲಿ 3.28 ಎಕರೆ ಭೂಮಿಯನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಜಿಲ್ಲಾಡಳಿತ ವಶಪಡಿಸಿಕೊಂಡಿತು. ===
- 511 ಕೋಟಿ ರೂ. ಮೌಲ್ಯದ ಭೂಮಿ ವಶ
- ಸರ್ಕಾರದ ಅದಾಯವೂ ಹೆಚ್ಚಲಿದೆ
ಬಳ್ಳಾರಿ : ಜಿಲ್ಲೆಯ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜಿಲ್ಲಾಡಳಿತವೂ ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಕಳೆದ ಎರಡು ತಿಂಗಳಲ್ಲಿ ಜಿಲ್ಲಾಡಳಿತ ನಡೆಸಿದ ಭರ್ಜರಿ ಹತ್ತು ಕಾರ್ಯಾಚರಣೆಗಳಲ್ಲಿ ಬರೋಬ್ಬರಿ 511 ಕೋಟಿ ರೂ. ಮೌಲ್ಯದ 108.67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ.
ಒತ್ತುವರಿ ಮುಕ್ತಗೊಳಿಸಿದ ಈ ಜಾಗಗಳಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಡಿ ಗುರುತಿಸಿ, ನಾಮಫಲಕಗಳನ್ನು ಅಳವಡಿಸುವ ಮೂಲಕ ಸರ್ಕಾರದ ಆಸ್ತಿಯನ್ನು ಸುರಕ್ಷಿತಗೊಳಿಸಿದ್ದಾರೆ. ಆದರೆ, ಸಿಕ್ಕಿರುವ ಈ ಬೃಹತ್ ಆಸ್ತಿಯನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಿಕೊಳ್ಳಲು ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಎದ್ದುಕಾಣುತ್ತಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.
ಸರ್ಕಾರಿ ಬೊಕ್ಕಸಕ್ಕೆ ನಷ್ಟ : ಜಿಲ್ಲೆಯೂ ದಿನೇದಿನೆ ಬೆಳೆಯುತ್ತಿದ್ದು, ಜನಸಂಖ್ಯೆಯೂ ತೀವ್ರವಾಗಿ ಹೆಚ್ಚುತ್ತಿದೆ. ನಗರದಲ್ಲಿರುವ ಬಹುತೇಕ ಅಂಗನವಾಡಿಗಳು, ಸರ್ಕಾರಿ ಮಹಿಳಾ ಮತ್ತು ಹುಡುಗರ ವಸತಿ ನಿಲಯಗಳು ಸ್ವಂತ ಸೂರಿಲ್ಲದೆ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಇದರಿಂದಾಗಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಬಾಡಿಗೆ ರೂಪದಲ್ಲಿ ವ್ಯಯವಾಗುತ್ತಿದ್ದು, ಸರ್ಕಾರಿ ಬೊಕ್ಕಸಕ್ಕೆ ಭಾರಿ ಕೊಕ್ಕೆ ಬೀಳುತ್ತಿದೆ.
ನವೋದಯ ಶಾಲೆಗೆ ಸಿಗದ ಜಾಗ : ಬಳ್ಳಾರಿಯಿಂದ ವಿಜಯನಗರ ಜಿಲ್ಲೆ ಪ್ರತ್ಯೇಕಗೊಂಡ ನಂತರ, ಜಿಲ್ಲೆಗೆ ನವೋದಯ ಶಾಲೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಆದರೆ ದುರಂತವೆಂದರೆ, ನಗರದಲ್ಲಿ ಸೂಕ್ತ ಸ್ಥಳಾವಕಾಶ ಸಿಗದ ಕಾರಣ ಈವರೆಗೂ ಶಾಲೆಗೆ ಭೂಮಿ ಪೂಜೆ ನೆರವೇರಿಸಲು ಸಾಧ್ಯವಾಗಿಲ್ಲ.
ಜಿಲ್ಲಾಡಳಿತದ ಉತ್ಸುಕತೆ : : ಸದ್ಯ ವಶಪಡಿಸಿಕೊಂಡಿರುವ 108 ಎಕರೆ ಭೂಮಿಯಲ್ಲಿ ಶೇ. 70ರಷ್ಟು ನಗರದ ಮಧ್ಯೆದಲ್ಲಿ ಇರುವುದರಿಂದ, ಇದನ್ನು ಸಾರ್ವಜನಿಕ ಕಟ್ಟಡಗಳಿಗೆ ಬಳಸಿಕೊಳ್ಳಲು ಜಿಲ್ಲಾಡಳಿತ ತೀವ್ರ ಉತ್ಸುಕವಾಗಿದೆ. ಇಲ್ಲಿ ಸರ್ಕಾರಿ ಕಚೇರಿಗಳು, ಅಂಗನವಾಡಿ ಹಾಗೂ ಹೈಟೆಕ್ ವಸತಿ ನಿಲಯಗಳನ್ನು ನಿರ್ಮಿಸಲು ಉದ್ದೇಶಿಸಿದೆ.
ಜಿಲ್ಲೆಗೆ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ (ಡಿಎಂಎಫ್), ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ), ಕರ್ನಾಟಕ ಗಣಿಗಾರಿಕೆ ಪರಿಸರ ಪುನಃ ಸ್ಥಾಪನೆ (ಕೆಎಂಆರ್‌ಸಿ), ಸಿಎಸ್‌ಆರ್ ಸೇರಿದಂತೆ ನಾನಾ ಮೂಲಗಳಿಂದ ಅನುದಾನದ ಮಹಾಪೂರವೇ ಹರಿದುಬರುತ್ತಿದೆ. ಇಷ್ಟೆಲ್ಲಾ ಅನುದಾನಗಳು ಲಭ್ಯವಿದ್ದರೂ, ಸ್ಥಳೀಯ ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳು ಈ ಜಾಗದಲ್ಲಿ ಬೃಹತ್ ಕಟ್ಟಡಗಳನ್ನು ತಲೆಎತ್ತಿಸುವ ನಿಟ್ಟಿನಲ್ಲಿ ಆಸಕ್ತಿ ತೋರುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಸ್ಥಳೀಯ ಜನಪ್ರತಿನಿಧಿಗಳು ಇಚ್ಛಾಶಕ್ತಿ ವಹಿಸಿ ತಕ್ಷಣವೇ ಅನುದಾನ ಬಿಡುಗಡೆಗೊಳಿಸಿದರೆ, ವಶಪಡಿಸಿಕೊಂಡ ಭೂಮಿಯಲ್ಲಿ ಬೃಹತ್ ಕಾಂಪ್ಲೆಕ್ಸ್ ಹಾಗೂ ವಸತಿ ಸಂಕೀರ್ಣಗಳನ್ನು ನಿರ್ಮಿಸಬಹುದು. ಒಂದೇ ಸೂರಿನಡಿ ವಿವಿಧ ಇಲಾಖೆಗಳು ಹಾಗೂ ವಸತಿ ನಿಲಯಗಳು ನಿರ್ಮಾಣಗೊಂಡರೆ ಸಾರ್ವಜನಿಕರಿಗೆ ಅಲೆದಾಟ ತಪ್ಪುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಕಲಿಯಲು ಉತ್ತಮ ವಾತಾವರಣ ಸಿಗುತ್ತದೆ.
ಇನ್ನೊಂದೆಡೆ, ಜಿಲ್ಲಾಡಳಿತದ ಈ ದಿಟ್ಟ ಕ್ರಮದಿಂದಾಗಿ ಭೂಮಿ ಕಳೆದುಕೊಂಡ ರಾಜಕೀಯ ಪ್ರಭಾವಿ ನಾಯಕರು ಅಧಿಕಾರಿಗಳ ವಿರುದ್ಧ ತೀವ್ರ ಅಕ್ರೋಶಗೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಈಗಿರುವ ಅಧಿಕಾರಿಗಳು ವರ್ಗಾವಣೆಗೊಂಡು ಹೋಗುತ್ತಿದ್ದಂತೆ, ಮತ್ತೆ ಅದೇ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಬೇಕು ಎಂಬ ಆಲೋಚನೆಯಲ್ಲಿ ಕಾಯುತ್ತಿದ್ದಾರೆ ಎನ್ನಲಾಗಿದೆ.
ಭೂ ಮಾಫಿಯಾ ಕೈಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಆಸ್ತಿಯನ್ನು ಮುಕ್ತಗೊಳಿಸಿ ಜಿಲ್ಲಾಡಳಿತ ತನ್ನ ಕರ್ತವ್ಯ ನಿಭಾಯಿಸಿದೆ. ಈಗ ಜನಪ್ರತಿನಿಧಿಗಳ ಅಂಗಳದಲ್ಲಿದೆ. ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ, ಮುಂಬರುವ ದಿನಗಳಲ್ಲಿ ಈ ಜಾಗವನ್ನು ಸಾರ್ವಜನಿಕ ಆಸ್ತಿಯನ್ನಾಗಿ ಪರಿವರ್ತಿಸಿ ಬೃಹತ್ ಕಟ್ಟಡಗಳನ್ನು ನಿರ್ಮಿಸಿದರೆ, ಸ್ಥಳೀಯ ಜನಪ್ರತಿನಿಧಿಗಳು ಸಾರ್ವಜನಿಕರ ಅಪಾರ ಮೆಚ್ಚುಗೆಗೆ ಪಾತ್ರರಾಗಲಿದ್ದಾರೆ. ಇಲ್ಲದಿದ್ದರೆ, ಅಧಿಕಾರಿಗಳು ಹೋದ ಮೇಲೆ ಈ ಜಾಗ ಮತ್ತೆ ಒತ್ತುವರಿದಾರರ ಪಾಲಾಗುವುದರಲ್ಲಿ ಸಂಶಯವಿಲ್ಲ.
"
ಕೋಟ್... ನಗರದಲ್ಲಿ ವಶಪಡಿಸಿಕೊಂಡಿರುವ ಜಾಗದಲ್ಲಿ ಹಾಸ್ಟೆಲ್ ಸೇರಿದಂತೆ ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಬಳಸಿಕೊಳ್ಳಲು ಉದ್ದೇಶಿಸಿದೆ.- ಮಹಮ್ಮದ್ ಎನ್.ಜುಬೇರ್, ಎಡಿಸಿ, ಬಳ್ಳಾರಿ.