ಕಂಪ್ಲಿ ಸಕ್ಕರೆ ಕಾರ್ಖಾನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಮೌಲಾನಾ ಆಜಾದ್ ಶಾಲೆ ಕಟ್ಟಡ ಸ್ಥಳಕ್ಕೆ ಪುರಸಭೆ ಮಾಜಿ ಸದಸ್ಯ ಸಿ.ಆರ್.ಹನುಮಂತ, ಪ್ರಮುಖರಾದ ಎನ್.ಹಬೀಬ್ ರೆಹಮಾನ್, ಕೆ.ಮಸ್ತಾನ್ ಸಾಬ್, ಐ.ಹೊನ್ನೂರಸಾಬ್, ಎಂ.ರಾಜಾಭಕ್ಷಿ, ಎಂ.ಉಸ್ಮಾನ್ ಇತರರಿದ್ದರು.
ಕಂಪ್ಲಿ: ಶಾಸಕರ ಸೂಚನೆ ಮೇರೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್ ಹಾಗೂ ಪಕ್ಷದ ಪ್ರಮುಖರು ಪಟ್ಟಣದ ಸಕ್ಕರೆ ಕಾರ್ಖಾನೆ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆ ಕಟ್ಟಡ ನಿರ್ಮಾಣ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳೊಂದಿಗೆ ಮಾತಿನ ಚಕಮಕಿ ನಡೆಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್ ಮಾತನಾಡಿ, ಶಾಸಕರ ಸೂಚನೆಯಂತೆ ಮೌಲಾನಾ ಆಜಾದ್ ಶಾಲೆ ಕಟ್ಟಡ ನಿರ್ಮಿಸುವ ಸ್ಥಳ ವೀಕ್ಷಿಸಲು ಬಂದಿದ್ದೇವೆ. ಪಾಲಕರು, ಪೋಷಕರು, ಸ್ಥಳೀಯ ನಿವಾಸಿಗಳೊಂದಿಗೆ ಚರ್ಚಿಸಿದ ನಂತರ ಶಾಲೆ ಕಟ್ಟಡ ನಿರ್ಮಾಣ ಕುರಿತು ಶಾಸಕರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಪುರಸಭೆ ಮಾಜಿ ಸದಸ್ಯ ಸಿ.ಆರ್.ಹನುಮಂತ ಮಾತನಾಡಿ, ಮೌಲಾನಾ ಆಜಾದ್ ಶಾಲೆ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿಗಳಿಗೆ ಕೆಲವರು ಮನೆಗಳನ್ನು ತೆರವುಗೊಳಿಸುತ್ತಾರೆಂದು ತಪ್ಪು ಮಾಹಿತಿ ನೀಡಿದ್ದಾರೆ. ಮನೆಗಳನ್ನು ತೆರವುಗೊಳಿಸುವ ಉದ್ದೇಶ ನಮ್ಮದಲ್ಲ ಎಂದರು.
ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್ ರೆಹಮಾನ್ ಮಾತನಾಡಿ, ಮೌಲಾನಾ ಆಜಾದ್ ಆಂಗ್ಲ ಮಾಧ್ಯಮದ ಶಾಲೆಯಾಗಿದ್ದು ಆರ್ಥಿಕವಾಗಿ ಹಿಂದುಳಿದ ಶೇ.75 ಅಲ್ಪಸಂಖ್ಯಾತರ ಮಕ್ಕಳು, ಶೇ.25 ಎಸ್ಸಿ, ಎಸ್ಟಿ, ಒಬಿಸಿ, ಸಾಮಾನ್ಯವರ್ಗದ ಮಕ್ಕಳಿಗೆ ವರದಾನವಾಗಿದೆ ಎಂದರು.
ನಿವಾಸಿಗಳಾದ ರಬಿಯಾ ಟಿ.ನಿಸಾರ್, ಪದ್ಮಾ, ನೀಲಮ್ಮ, ಫಾತೀಮಾ, ಚಾಂದ್‌ಬೀ, ನೀಲಮ್ಮ ಇತರರು ಮಾತನಾಡಿ, ಮೌಲಾನಾ ಆಜಾದ್ ಶಾಲೆ ಕಾರ್ಖಾನೆ ಪ್ರದೇಶದಲ್ಲಿ ನಿರ್ಮಿಸಿ. ಆದರೆ, ಚಿಕ್ಕದಾಗಿರುವ ಶಾಲಾವರಣದಲ್ಲಿ ನಿರ್ಮಿಸುವುದು ಬೇಡ ಎಂದರು. ಕಾಂಗ್ರೆಸ್ ಪ್ರಮುಖರಾದ ಬಿ.ಸಿದ್ದಪ್ಪ, ಕೆ.ಮಸ್ತಾನ್ ಸಾಬ್, ಎಂ.ಉಸ್ಮಾನ್, ಲಡ್ಡು ಹೊನ್ನೂರವಲಿ, ಆರ್.ಪಿ.ಶಶಿಕುಮಾರ್, ಕೆ.ಕೃಷ್ಣ, ಎಚ್.ನಾಗರಾಜ, ಐ.ಹೊನ್ನೂರಸಾಬ್, ಎಂ.ರಾಜಭಕ್ಷಿ ಇತರರಿದ್ದರು.