ಸಾಂದರ್ಭಿಕ ಚಿತ್ರ 
ಬಳ್ಳಾರಿ

ಧ್ವಜಾರೋಹಣಕಷ್ಟೇ ಸೀಮಿತರಾದ ಸಚಿವರು!

ಗಣಿ ಜಿಲ್ಲೆ ಬಳ್ಳಾರಿಗೆ ಕಳೆದ ನಾಲ್ಕು ವರ್ಷಗಳಲ್ಲಿ ರಾಷ್ಟ್ರೀಯ ಹಬ್ಬಗಳಿಗೆ ಧ್ವಜಾರೋಹಣ ನೆರವೇರಿಸಲು ನಾಲ್ವರು ಸಚಿವರು ಬದಲಾವಣೆಯಾಗಿದ್ದು, ಇದೀಗ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವಕ್ಕೆ ವಸತಿ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅವರನ್ನು ನೇಮಿಸುವ ಮೂಲಕ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ವಿಜಯವಾಣಿ ಸುದ್ದಿಜಾಲ ಬಳ್ಳಾರಿ

ಗಣಿ ಜಿಲ್ಲೆಗೆ ಕಳೆದ ನಾಲ್ಕು ವರ್ಷಗಳಲ್ಲಿ ರಾಷ್ಟ್ರೀಯ ಹಬ್ಬಗಳಿಗೆ ಧ್ವಜಾರೋಹಣ ನೆರವೇರಿಸಲು ನಾಲ್ವರು ಸಚಿವರು ಬದಲಾವಣೆಯಾಗಿದ್ದು, ಇದೀಗ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವಕ್ಕೆ ವಸತಿ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅವರನ್ನು ನೇಮಿಸುವ ಮೂಲಕ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

2023ರಲ್ಲಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ವಾಲ್ಮೀಕಿ ಹಗರಣ ಆರೋಪದಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಸರ್ಕಾರ ಬಳ್ಳಾರಿ ಹಾಗೂ ವಿಜಯನಗರದ ಜಂಟಿ ಉಸ್ತುವಾರಿಯಾಗಿ ಜಮೀರ್‌ಗೆ ಹೊಣೆ ವಹಿಸಿತು. ಈ ವೇಳೆ ಮೂಲ ಉಸ್ತುವಾರಿ ವಿಜಯನಗರವಾಗಿದ್ದರಿಂದ ಅವರು ಮೂರು ವರ್ಷ ಬಳ್ಳಾರಿ ಕಡೆ ಗಮನಹರಿಸಲಿಲ್ಲ. ಜಿಲ್ಲೆಯ ಯಾವ ರಾಷ್ಟ್ರೀಯ ಹಬ್ಬಗಳಲ್ಲಿಯೂ ಭಾಗಿಯಾಗಿರಲಿಲ್ಲ. ಹೀಗಾಗಿ ಪ್ರತಿ ಬಾರಿಯೂ ಸರ್ಕಾರ ಜಿಲ್ಲೆಗೆ ಅತಿಥಿ ಸಚಿವರೊಬ್ಬರನ್ನು ಧ್ವಜಾರೋಹಣಕ್ಕೆ ನೇಮಿಸುವುದನ್ನು ರೂಢಿ ಮಾಡಿಕೊಂಡಿತು. ಅದರಂತೆ, ಸದ್ಯ ನ.1ರಂದು ನಡೆಯುವ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಲು ಮೊದಲ ಬಾರಿಗೆ ಜಮೀರ್ ಅಹ್ಮದ್ ಖಾನ್ ಅವರನ್ನು ನಿಯೋಜಿಸುವ ಮೂಲಕ ಜಿಲ್ಲೆಗೆ ಅತಿಥಿ ಉಸ್ತುವಾರಿ ಸಚಿವರು ಬಂದು ಹೋಗುವ ಪರಿಪಾಠ ಈ ಬಾರಿಯೂ ವಿಸ್ತರಿಸಿದೆ.

ಯಾರೆಲ್ಲ ಬಂದಿದ್ದರು?

ರಾಜ್ಯದಲ್ಲಿ 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯುವ ಸಬಲೀಕರಣ, ಕ್ರೀಡೆ ಮತ್ತು ಬುಡಕಟ್ಟು ಕಲ್ಯಾಣ(ಪರಿಶಿಷ್ಟ ಪಂಗಡಗಳ ಕಲ್ಯಾಣ) ಖಾತೆ ಸಚಿವರಾಗಿ ಬಿ.ನಾಗೇಂದ್ರ ಅವರು 2023ರ ಆ.15ರ ಸ್ವಾತಂತ್ರೃ, ಸೆ.17ರ ಕಲ್ಯಾಣ ಕರ್ನಾಟಕ ವಿಮೋಚನೆ, ನ.1 ಕನ್ನಡ ರಾಜ್ಯೋತ್ಸವ, 2024ರ ಜ.26ರ ಗಣರಾಜ್ಯೋತ್ಸವ ಹಾಗೂ 2026 ಆ.15ರ ಸ್ವಾತಂತ್ರೃ ಧ್ವಜಾರೋಹಣ ನೆರವೇರಿಸಿದ್ದರು. 2024ರ ಆ.15ರ ಸ್ವಾತಂತ್ರೃಹಾಗೂ ನ.1ರಂದು ಕನ್ನಡ ರಾಜ್ಯೋತ್ಸವ ಧ್ವಜಾರೋಹಣವನ್ನು ಸಚಿವ ಕೃಷ್ಣ ಬೈರೇಗೌಡ ನೆರವೇರಿಸಿದರು. ಸಚಿವ ರಹೀಂ ಖಾನ್ 2024ರಲ್ಲಿ ಸೆ.17 ಕಲ್ಯಾಣ ಕರ್ನಾಟಕ ವಿಮೋಚನ ದಿನಾಚರಣೆ, 2025ರಲ್ಲಿ ಜ.26 ಗಣರಾಜ್ಯೋತ್ಸವ, ಆ.15ರ ಸ್ವಾತಂತ್ರೃ, ಸೆ.17ರ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ, ನ.1ರಂದು ಕನ್ನಡ ರಾಜ್ಯೋತ್ಸವ ಹಾಗೂ 2026ರ ಜ.26 ಗಣರಾಜ್ಯೋತ್ಸವ ಸೇರಿ ಆರು ಬಾರಿ ಧ್ವಜಾರೋಹಣ ನೆರವೇರಿಸಿದ್ದರು. 2026ರ ಸೆ.17ರ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಧ್ವಜಾರೋಹಣವನ್ನು ಸಚಿವ ಟಿ. ರಘುಮೂರ್ತಿ ನೆರವೇರಿಸಿದ್ದರು.

ಅನಾಥವಾದ ಗಣಿನಾಡು

ಜಿಲ್ಲೆಯಲ್ಲಿ ಕರ್ನಾಟಕ ಅಭಿವೃದ್ಧಿ ಪ್ರಗತಿ ಪರಿಶೀಲನೆ (ಕೆಡಿಪಿ) ಸಭೆ ನಡೆದು ವರ್ಷವೇ ಕಳೆದಿದೆ. ಇತ್ತ ಕೆಡಿಪಿ ಸಭೆಯೂ ಇಲ್ಲ, ಜಿಲ್ಲಾ ಉಸ್ತುವಾರಿ ಸಚಿವರೂ ಇಲ್ಲದೆ ಅನಾಥವಾಗಿದೆ. ಮಹಾನಗರ ಪಾಲಿಕೆ, ಬುಡಾದಲ್ಲಿ ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಬರ, ಮಳೆ ಕೊರತೆ ಹಿನ್ನೆಲೆಯಲ್ಲಿ ಕುಡಿವ ನೀರು, ತುಂಗಭದ್ರಾ ಜಲಾಶಯದಿಂದ ಎಚ್‌ಎಲ್ ಮತ್ತು ಎಲ್‌ಎಚ್ ಕಾಲುವೆ ಕೊನೇ ಭಾಗಕ್ಕೆ ನೀರು ತಲುಪುತ್ತಿಲ್ಲ. ಜಾನವಾರುಗಳಿಗೆ ಮೇವು ವಿತರಣೆ, ರಾಬಕೊವಿ ಹಾಲು ಒಕ್ಕೂಟದ ಕೋಟ್ಯಂತರ ರೂ. ಅಕ್ರಮ ಸೇರಿದಂತೆ ಸಾಲು ಸಾಲು ಸಮಸ್ಯೆಗೆ ಸ್ಪಂದಿಸುವವರು ಇಲ್ಲವಾಗಿದ್ದಾರೆ ಎಂಬುದು ಸಾರ್ವಜನಿಕರ ದೂರಾಗಿದೆ. ಜಿಲ್ಲೆಯ ಪ್ರಮುಖ ಬೆಳೆಗಳಾದ ಭತ್ತವೂ ಈ ಬಾರಿ ಮಳೆ ಕೊರತೆಯಿಂದ ಶೇ.50 ನಾಟಿ ಕಡಿಮೆಯಾಗಿದೆ. ದಿನೇದಿನೆ ಜಲಾಶಯದಲ್ಲಿ ನೀರಿನ ಪ್ರಮಾಣ ತಗ್ಗುತ್ತಿರುವುದರಿಂದ ಈ ಬೆಳೆಗೆ ಸಂಪೂರ್ಣ ನೀರು ದೊರೆಯಲಿದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಈ ಎಲ್ಲ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸಲು ಜಿಲ್ಲೆಗೆ ಉಸ್ತುವಾರಿ ಸಚಿವರನ್ನು ನೇಮಿಸಬೇಕಿದ್ದ ಸರ್ಕಾರ ಗಣಿನಾಡನ್ನು ಕಡೆಗಣಿಸಿ ಕಾಲಹಣ ಮಾಡುತ್ತಿದೆ.

ಕಾಯಂ ಉಸ್ತುವಾರಿ ಯಾವಾಗ

ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದಾಗಿನಿಂದಲೂ ಅವರೇ ಮತ್ತೊಮ್ಮೆ ಸಚಿವರಾಗಿ ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಆದರೆ, ಸರ್ಕಾರದ ಸದ್ಯದ ಪರಿಸ್ಥಿತಿಯಲ್ಲಿ ಈ ಮಾತು ಅಸಾಧ್ಯ ಎನ್ನಲಾಗಿದೆ. ಅವರು ಸಚಿವರಾಗಿ ಬರುವವರೆಗೆ ಉಸ್ತುವಾರಿ ಹೊಣೆ ಜಮೀರ್ ಅವರನ್ನು ನೇಮಿಸುವ ಚರ್ಚೆಯೂ ನಡೆಯುತ್ತಿದೆ. ಆದರೆ, ಜಮೀರ್ ಜಿಪಂ ಹಾಗೂ ತಾಪಂ ಚುನಾವಣೆ ದೃಷ್ಟಿಯಿಂದ ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ. ಜತೆಗೆ ಜಿಲ್ಲೆಯಲ್ಲಿ ನಡೆದಿರುವ ಅಪಸವ್ಯಗಳಿಂದ ಕಾಯಂ ಉಸ್ತುವಾರಿ ಇಲ್ಲದಿರುವುದೂ ಒಂದು ಕಾರಣ ಎನ್ನಲಾಗಿದೆ. ಒಟ್ಟಾರೆ, ಸಮಸ್ಯೆಗಳಿಗೆ ಸ್ಪಂದಿಸುವಂತ ಸಚಿವರನ್ನು ಸರ್ಕಾರ ನೇಮಿಸಲಿ ಎಂಬ ಆಗ್ರಹ ಕೇಳಿ ಬರುತ್ತಿದೆ.